ಬೆಂಗಳೂರು, ಜೂ 26 (DaijiworldNews/DB): ಮಾಜಿ ಸಚಿವ ರಮೇಶ್ ಜಾರಕಿಹೊಳಿ 819 ಕೋಟಿ ರೂ. ಸರ್ಕಾರದ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಕ್ಷ್ಮಣ್, ಈ ವಂಚನೆ ಪ್ರಕರಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಫಡ್ನವಿಸ್, ರಾಜ್ಯದ ಮಾಜಿ ಸಿಎಂ ಒಬ್ಬರು ಕೂಡಾ ಭಾಗಿಯಾಗಿದ್ದಾರೆ. ಆದರೆ ಇಷ್ಟು ದೊಡ್ಡ ಮೊತ್ತದ ಹಣವನ್ನು ಲೂಟಿ ಮಾಡಿದರೂ ಇಲ್ಲಿವರೆಗೆ ಅವರಿಗೆ ಒಂದೇ ಒಂದು ನೋಟಿಸ್ ನೀಡಿಲ್ಲ ಎಂದು ಕಿಡಿ ಕಾರಿದರು.
ವಿವಿಧ ಬ್ಯಾಂಕ್ಗಳಿಂದ ರಮೇಶ್ ಜಾರಕಿಹೊಳಿ 578 ಕೋಟಿ ರೂ. ಸಾಲ ಪಡೆದಿದ್ದಾರೆ. ಅಲ್ಲದೆ ಅವರದೇ ಸೌಭಾಗ್ಯ ಲಕ್ಷ್ಮಿ ಶುಗರ್ ಲಿಮಿಟೆಡ್ ವತಿಯಿಂದ ಬೇರೆ ಬೇರೆ ಬ್ಯಾಂಕ್ಗಳಿಂದ ಪಡೆದ ಯಾವುದೇ ಸಾಲವನ್ನೂ ಮರುಪಾವತಿ ಮಾಡಿಲ್ಲ. ಅಭಿನಂದನ್ ಪಾಟೀಲ್ ಎಂಬುವವರ ಅರಿಹಂತ್ ಸೊಸೈಟಿಯಿಂದ ಜಾರಕಿಹೊಳಿ ಅವರು 48 ಕೋಟಿ ರೂ. ಸಾಲ ಪಡೆದಿದ್ದಾರೆ. ಆದಾಯ ತೆರಿಗೆ ಪಾವತಿಯನ್ನೂ ಅವರು ಮಾಡಿಲ್ಲ. 156 ಕೋಟಿ ರೂ.ಗಳಷ್ಟು ಆದಾಯ ತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ದಾಖಲೆಗಳನ್ನು ಲಕ್ಷ್ಮಣ್ ಬಿಡುಗಡೆ ಮಾಡಿದರು.
ಕಳೆದ ಎರಡ್ಮೂರು ವರ್ಷಗಳ ಹಿಂದೆ ಸಾಲ ತೀರಿಸಲು ಅಪೆಕ್ಸ್ ಬ್ಯಾಂಕ್ ಸಲ್ಲಿಸಿದ್ದ ನೊಟೀಸ್ಗೆ ಯಾವುದೇ ಬೆಲೆ ನೀಡಿಲ್ಲ. ಆರು ವಾರಗಳಲ್ಲಿ ಸಾಲ ಮರುಪಾವತಿಗೆ ಕೋರ್ಟ್ ಸೂಚಿಸಿದ್ದರೂ, ಇಲ್ಲಿವರೆಗೆ ಸಾಲ ಕಟ್ಟದೆ ಬ್ಯಾಂಕ್ಗಳಿಗೆ ವಂಚಿಸಿದ್ದಾರೆ ಎಂದವರು ಆರೋಪಿಸಿದರು.
ರಮೇಶ್ ಜಾರಕಿಹೊಳಿ ಹಣಕಾಸಿನ ವ್ಯವಹಾರದಲ್ಲಿ ಇಷ್ಟೆಲ್ಲ ಅಕ್ರಮ ಎಸಗಿದ್ದರೂ ಕೇಂದ್ರ ಸರ್ಕಾರ ಮೌನವಹಿಸಿದೆ. ಜಾರಿ ನಿರ್ದೇಶನಾಲಯವೂ ಸುಮ್ಮನಿದೆ. ಹೀಗಾಗಿ ನಾನೇ ಬೆಂಗಳೂರಿನ ಇಡಿ ಕಚೇರಿಯಲ್ಲಿ ಈ ಸಂಬಂಧ ದೂರು ಸಲ್ಲಿಸುವುದರೊಂದಿಗೆ ಉಚ್ಚ ನ್ಯಾಯಾಲಯದಲ್ಲಿ ಪೆಟಿಷನ್ ಹಾಕುತ್ತೇನೆ ಎಂದರು.