ಬೆಂಗಳೂರು, ಜೂ 26 (DaijiworldNews/DB): ವರ್ಷದ ಹಿಂದೆ ನಾಪತ್ತೆಯಾಗಿದ್ದ ಬಾಲಕನನ್ನು ಫೇಸ್ಬುಕ್ ಸಹಾಯದಿಂದ ಮರಳಿ ತಾಯಿ ಮಡಿಲು ಸೇರುವಂತೆ ಮಾಡಿದ ವಿದ್ಯಾಮಾನ ಬೆಂಗಳೂರಿನಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದ ಗ್ರಾಮವೊಂದರಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿದ್ದ ಬಾಲಕ ಸುಹಾಸ್ ಕಳೆದ ವರ್ಷ ಗೂಡ್ಸ್ ರೈಲು ಹತ್ತಿ ಕಾಣೆಯಾಗಿದ್ದ. ವರ್ಷದ ಬಳಿಕ ಆತ ಬೆಂಗಳೂರಿನಲ್ಲಿ ಪತ್ತೆಯಾಗಿದ್ದ. ಮೂರು ವಾರಗಳ ಹಿಂದೆ ಬಿಟಿಎಂ ಲೇಔಟ್ನಲ್ಲಿ ಆತ ಹಸಿವಿನಿಂದ ಓಡಾಡುತ್ತಿದ್ದಾಗ ಸ್ಥಳೀಯ ಬೇಕರಿಯೊಂದರ ಮಾಲಕ ರಾಜಣ್ಣ, ಯುವಕರಾದ ನಿತೀಶ್ ಮತ್ತು ಶ್ರೀಧರ್ ಅವರು ಬಾಲಕನನ್ನು ಕರೆದು ವಿಚಾರಿಸಿದ್ದಾರೆ. ಈ ವೇಳೆ ಹಿಂದಿಯಲ್ಲಿ ಮಾತನಾಡಿದ ಬಾಲಕ ಅಳುತ್ತಾ ತಾನು ಕಾಣೆಯಾದ ಘಟನೆಯನ್ನು ವಿವರಿಸಿದ್ದಾನೆ. ಬಳಿಕ ಅದೇ ಬೇಕರಿಯಲ್ಲಿ ಜಾಗ ಮತ್ತು ಕೆಲಸ ನೀಡಿ ರಾಜಣ್ಣ ಮಾನವೀಯತೆ ಮೆರೆದಿದ್ದರು.
ಬಾಲಕನನ್ನು ಕರೆದು ವಿಚಾರಿಸಿದವರ ಪೈಕಿ ನಿತೀಶ್ ಅವರು, ಬಾಲಕ ಸುಹಾಸ್ ಬಳಿ ಆತನ ಮನೆಯವರ ಬಗ್ಗೆ ತಿಳಿದುಕೊಂಡರು. ಬಾಲಕ ತನ್ನ ಸಹೋದರನ ಹೆಸರು ಹೇಳಿದಾಗ ಫೇಸ್ಬುಕ್ನಲ್ಲಿ ಸಹೋದರನನ್ನು ಹುಡುಕಿದರು. ಬಳಿಕ ಸಹೋದರನ ಫೋಟೋವನ್ನು ಸುಹಾಸ್ ಗುರುತಿಸಿದ್ದಾನೆ. ಕೂಡಲೇ ಫೇಸ್ಬುಕ್ ಮೆಸೆಂಜರ್ ಮೂಲಕ ಸುಹಾಸ್ನ ಸಹೋದರನಿಗೆ ಮಾಹಿತಿ ನೀಡಿ ಬೆಂಗಳೂರಿಗೆ ಬರುವಂತೆ ತಿಳಿಸಲಾಯಿತು. ಮಗನ ಇರುವಿಕೆಯನ್ನು ಖಾತ್ರಿ ಪಡಿಸಿಕೊಂಡ ತಾಯಿ ಬೆಂಗಳೂರಿಗೆ ಬಂದು ಮಗನನ್ನು ಕರೆದೊಯ್ದಿದ್ದಾರೆ. ತಾಯಿ ಮತ್ತು ಮಗನ ವರ್ಷದ ಬಳಿಕದ ಭೇಟಿಯು ಅಲ್ಲಿದ್ದವರ ಮನಕಲಕುವಂತಿತ್ತು. ಇಬ್ಬರೂ ಪರಸ್ಪರ ತಬ್ಬಿಕೊಂಡು ಅಳುತ್ತಿದ್ದ ದೃಶ್ಯ ಕರುಳಕುಡಿಯ ಬಂಧಕ್ಕೆ ಸಾಕ್ಷಿಯಾಗಿತ್ತು.