ಅಗರ್ತಲಾ, ಜೂ 26 (DaijiworldNews/DB): ತ್ರಿಪುರಾದ ಮುಖ್ಯಮಂತ್ರಿ ಮಾಣಿಕ್ ಸಾಹಾ ಅವರು ಬರ್ದೊವಾಲಿ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸುವ ಮೂಲಕ ಮುಖ್ಯಮಂತ್ರಿ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
ತ್ರಿಪುರಾದ ಅಗರ್ತಲಾ, ಜುಬಾರಾಜ್ನಗರ್, ಸುರ್ಮಾ ಹಾಗೂ ಬರ್ದೊವಾಲಿ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಮಾಣಿಕ್ ಸಾ ಅವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಮುಂದುವರಿಯಲು ಈ ಚುನಾವಣಾ ಫಲಿತಾಂಶ ನಿರ್ಣಾಯಕವಾಗಿತ್ತು. ಇದೀಗ ಅವರು 6 ಸಾವಿರ ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಪರಾಭವಗೊಳಿಸಿದರು. ಆ ಮೂಲಕ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
ಇನ್ನು ಚುನಾವಣೆ ನಡೆದಿದ್ದ 4 ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳನ್ನು ಬಿಜೆಪಿ ಗೆದ್ದು ಬೀಗಿದೆ. ಜುಬಾರಾಜ್ನಗರ್, ಸುರ್ಮಾ ಹಾಗೂ ಬರ್ದೊವಾಲಿ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸಿದರೆ ಅಗರ್ತಲಾ ಕ್ಷೇತ್ರದಿಂದ ಕಾಂಗ್ರೆಸ್ ಗೆದ್ದಿದೆ ಎಂದು ಚುನಾವಣಾ ಆಯೋಗ ತಿಳಿಸಿರುವುದಾಗಿ ವರದಿಯಾಗಿದೆ.
ವಿಪ್ಲವ್ ದೇವ್ ಅವರು ಕಳೆದ ತಿಂಗಳು ತ್ರಿಪುರಾ ಮುಖ್ಯಮಂತ್ರಿ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ ಬೆನ್ನಲ್ಲೇ ರಾಜ್ಯಸಭಾ ಸದಸ್ಯ ಮಾಣಿಕ್ ಸಾಹಾ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.