ಮುಂಬೈ, ಜೂ 26 (DaijiworldNews/DB): ಮಹಾರಾಷ್ಟ್ರ ಸರ್ಕಾರದ ವಿರುದ್ದ ಬಂಡಾಯವೆದ್ದು ಏಕನಾಥ ಶಿಂಧೆ ನೇತೃತ್ವದಲ್ಲಿ ಅಸ್ಸಾಂನ ಹೊಟೇಲ್ನಲ್ಲಿ ಬೀಡು ಬಿಟ್ಟಿರುವ ಶಾಸಕರಿಗೆ ಕೇಂದ್ರ ಸರ್ಕಾರ ವೈ+ ಶ್ರೇಣಿಯ ಭದ್ರತೆ ನೀಡಿದೆ.
ಮಹಾ ಸರ್ಕಾರದ ವಿರುದ್ದ ಬಂಡಾಯವೆದ್ದ ಶಾಸಕರಿಗಿದ್ದ ಭದ್ರತೆಯನ್ನು ಕಳೆದ ಎರಡು ದಿನಗಳ ಹಿಂದಷ್ಟೇ ಸಿಎಂ ಉದ್ದವ್ ಠಾಕ್ರೆ ಅವರು ಹಿಂಪಡೆದಿದ್ದರು. ಇದರ ಬೆನ್ನಲ್ಲೇ ಶಿವಸೇನೆಯ 15 ಮಂದಿ ಶಾಸಕರಿಗೆ ಕೇಂದ್ರ ಗೃಹ ಸಚಿವಾಲಯ ಸಿ ಆರ್ ಪಿ ಎಫ್ ಭದ್ರತೆ ನೀಡಲು ಸೂಚನೆ ನೀಡಿದೆ.
ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ ಸರ್ಕಾರದ ವಿರುದ್ದ ಶಾಸಕರು ಬಂಡಾಯವೆದ್ದ ಹಿನ್ನೆಲೆಯಲ್ಲಿ ಮಹಾ ಸರ್ಕಾರ ತೀವ್ರ ಸಂಕಷ್ಟದಲ್ಲಿದೆ. ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿರುವ ಬಿಜೆಪಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ತೀವ್ರ ಕಸರತ್ತು ನಡೆಸುತ್ತಿದೆ. ಇದೀಗ ರೆಬೆಲ್ ಶಾಸಕರಿಗೆ ವೈ+ ಶ್ರೇಣಿಯ ಭದ್ರತೆಯನ್ನು ಬಿಜೆಪಿ ಸರ್ಕಾರ ಒದಗಿಸಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.