ನವದೆಹಲಿ, ಜೂ 26 (DaijiworldNews/DB): ಫಾಸ್ಟ್ಯಾಗ್ ಸ್ಕ್ಯಾನ್ ಮಾಡಿ ಮಾಲಕರ ಖಾತೆಯಿಂದ ಹಣ ಎಗರಿಸಲು ಯಾರಿಗೂ ಸಾಧ್ಯವಾಗುವುದಿಲ್ಲ ಎಂದು ನ್ಯಾಷನಲ್ ಪೇಮೆಂಟ್ಸ್ ಕೌನ್ಸಿಲ್ ಆಫ್ ಇಂಡಿಯಾ ಸ್ಪಷ್ಟನೆ ನೀಡಿದೆ.
ಕಾರಿನ ವಿಂಡ್ಶೀಲ್ಡ್ ಒರೆಸುವ ನೆಪದಲ್ಲಿ ಮಕ್ಕಳು ಫಾಸ್ಟ್ಯಾಗ್ ಸ್ಕ್ಯಾನ್ ಮಾಡಿ ಹಣ ಕದಿಯುತ್ತಾರೆಂಬ ವೀಡಿಯೋವೊಂದು ವೈರಲ್ ಆದ ಬೆನ್ನಿಗೇ ಸಂಸ್ಥೆಯು ಈ ಸ್ಪಷ್ಟನೆ ನೀಡಿದ್ದು, ವೈರಲ್ ವೀಡಿಯೋದಲ್ಲಿ ಯಾವುದೇ ಸತ್ಯವಿಲ್ಲ ಎಂದು ಹೇಳಿದೆ.
ಈ ವೀಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಮರು ಪೋಸ್ಟ್ ಮಾಡಿ ಇದು ನಿಜವೇ ಎಂದು ಪ್ರಶ್ನಿಸಿದ್ದರು. ಆದರೆ ಇದು ಸುಳ್ಳೆಂದು ನ್ಯಾಷನಲ್ ಪೇಮೆಂಟ್ಸ್ ಕೌನ್ಸಿಲ್ ಆಫ್ ಇಂಡಿಯಾ ಸ್ಪಷ್ಟನೆ ನೀಡಿದ ಬಳಿಕ ಅವನೀಶ್ ಅವರು ಮತ್ತೊಮ್ಮೆ ಟ್ವೀಟ್ ಮಾಡಿ ವೀಡಿಯೋ ಸುಳ್ಳಾಗಿದ್ದು, ಸಂಸ್ಥೆ ನೀಡಿದ ಮಾಹಿತಿಯನ್ನು ಶೇರ್ ಮಾಡಿದ್ದರು.