ಮುಂಬೈ, ಜೂ 25 (DaijiworldNews/DB): ಶಿವಸೇನಾದ ಯಾವುದೇ ಬಂಡಾಯ ಶಾಸಕನೂ ಬಾಳಾ ಸಾಹೇಬ್ ಠಾಕ್ರೆ ಹೆಸರನ್ನು ಬಳಸಲು ಬಿಡುವುದಿಲ್ಲ. ಬೇಕಾದರೆ ಅವರ ತಂದೆಯಂದಿರ ಹೆಸರು ಹೇಳಿಕೊಂಡು ಮತ ಯಾಚಿಸಲಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಹೇಳಿದ್ದಾರೆ.
ಮುಂಬೈನ ಶಿವಸೇನಾ ಭವನದಲ್ಲಿ ನಡೆದ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಹಾ ವಿಕಾಸ್ ಅಘಾಡಿ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡಾಯವೆದ್ದಿರುವ ಶಾಸಕರಿಗೆ ಖಡಕ್ ಸಂದೇಶ ರವಾನಿಸಿರುವ ಅವರು, ಬಾಳಾ ಸಾಹೇಬ್ ಠಾಕ್ರೆ ಅವರ ಹೆಸರನ್ನು ಹೇಳಿಕೊಂಡು ಚುನಾವಣೆಯಲ್ಲಿ ಮತ ಪಡೆಯಲು ಯಾರನ್ನೂ ಬಿಡುವುದಿಲ್ಲ ಎಂದಿದ್ದಾರೆ ಎಂಬುದಾಗಿ ಪಕ್ಷದ ಪ್ರಧಾನ ವಕ್ತಾರ ಸಂಜಯ್ ರಾವುತ್ ಹೇಳಿದ್ದಾರೆ.
ಬಂಡಾಯ ಶಾಸಕರ ವಿರುದ್ದ ಕ್ರಮ ಕೈಗೊಳ್ಳುವ ಸಂಬಂಧ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೆ, ಸ್ವಾರ್ಥಕ್ಕಾಗಿ ಬಾಳಾ ಸಾಹೇಬ್ ಠಾಕ್ರೆ ಅವರ ಹೆಸರು ಬಳಸಿಕೊಂಡವರ ವಿರುದ್ದವೂ ಸೂಕ್ತ ಕಾನೂನು ಕ್ರಮಕ್ಕೆ ನಿರ್ಧಾರ ಮಾಡಲಾಗಿದೆ. ಸಂಜೆ ವೇಳೆಗೆ ಅವರ ವಿರುದ್ದ ಯಾವ ರೀತಿಯ ಕ್ರಮ ಆಗಲಿದೆ ಎಂಬುದು ಗೊತ್ತಾಗಲಿದೆ ಎಂದು ರಾವತ್ ಹೇಳಿಕೆ ನೀಡಿದ್ದಾರೆ.