ಕೋಲ್ಕತಾ, ಜೂ 25 (DaijiworldNews/DB): ಮನೋರೋಗಿಯೊಬ್ಬ ಆಸ್ಪತ್ರೆಯಲ್ಲಿ ಮಲಗಿದ್ದಲ್ಲಿಂದ ತಪ್ಪಿಸಿಕೊಂಡು ಆಸ್ಪತ್ರೆ ಕಟ್ಟಡದ ಏಳನೇ ಮಹಡಿಯ ಅಂಚಿನಲ್ಲಿ ಎರಡು ಗಂಟೆಗಳ ಕಾಲ ಕುಳಿತು ಬಳಿಕ ಬಿದ್ದು ಗಂಭೀರ ಗಾಯಗೊಂಡ ಘಟನೆ ಶನಿವಾರ ನಗರದ ಮುಲ್ಲಿಕ್ ಬಜಾರ್ನಲ್ಲಿ ನಡೆದಿದೆ.
ಸುಜಿತ್ ಅಧಿಕಾರಿ ಎಂಬುವವರೇ ಬಿದ್ದು ಗಾಯಗೊಂಡ ಮನೋರೋಗಿ. ಇವರು ಇನ್ಸ್ಟಿಟ್ಯೂಟ್ ಆಫ್ ನ್ಯೂರೋಸೈನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ವಾರ್ಡ್ನ ಗಾಜಿನ ಕಿಟಕಿ ಮೂಲಕ ಕಾರ್ನಿಸ್ಗೆ ನುಸುಳಿದ್ದರು. ಇದರಿಂದ ಅಲ್ಲಿದ್ದ ಇತರರು ಆತಂಕಕ್ಕೊಳಗಾದರು. ಇತರರು ನೋಡುತ್ತಿದ್ದಂತೆಯೇ ಏಳನೇ ಮಹಡಿಯ ಅಂಚಿನಲ್ಲಿ ಕುಳಿತುಕೊಂಡವರನ್ನು ಕೆಳಗಿಳಿಸಲು ಅಗ್ನಿಶಾಮಕ ದಳ, ಪೊಲೀಸರು ಮತ್ತು ಆಸ್ಪತ್ರೆಯ ಅಧಿಕಾರಿಗಳು ಹರಸಾಹಸಪಟ್ಟರು. ಆದರೆ ಸುಮಾರು ಎರಡು ತಾಸು ಕಳೆದ ಬಳಿಕ ಮಧ್ಯಾಹ್ನ 1.10ರ ಸುಮಾರಿಗೆ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ತಲೆಬುರುಡೆ, ಪಕ್ಕೆಲುಬು ಮತ್ತು ಎಡಗೈಗೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೋಗಿಯನ್ನು ಕೆಳಕ್ಕಿಳಿಸಲು ಸ್ಥಳಕ್ಕೆ ಹೈಡ್ರಾಲಿಕ್ ಲ್ಯಾಡರ್ ತಂದು ಅದನ್ನು ರೋಗಿಯ ಬಳಿ ಕೊಂಡೊಯ್ದಾಗ ಜಿಗಿಯುವುದಾಗಿ ಆತ ಬೆದರಿಕೆ ಹಾಕಿದ್ದ. ಆತ ನೆಲಕ್ಕೆ ಬೀಳದಂತೆ ತಡೆಯುವ ಸಲುವಾಗಿ ಆಸ್ಪತ್ರೆಯ ನೌಕರರು ಕಟ್ಟಡದ ಹತ್ತಿರ ಸೋಫಾ, ಕುಶನ್ಗಳು ಮತ್ತು ಇತರ ಮೃದುವಾದ ವಸ್ತುಗಳನ್ನು ಹಾಕಿದ್ದರು. ಆದರೆ ಆತ ನೆಲಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ.