ಹುಬ್ಬಳ್ಳಿ, ಜೂ 25 (DaijiworldNews/DB): ಮದುವೆ ಆರತಕ್ಷತೆಗೆ ಎರಡು ದಿನವಿರುವಾಗ ಹೆತ್ತವರ ಆಶೀರ್ವಾದ ಪಡೆಯಲು ತೆರಳಿದ್ದ ಪತ್ನಿಯನ್ನು ಕಾರ್ಪೋರೇಟರ್ ಮತ್ತು ಪತ್ನಿಯ ತಂದೆ ಸೇರಿ ಕಿಡ್ನಾಪ್ ಮಾಡಿದ್ದಾರೆಂದು ಆರೋಪಿಸಿ ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ವಧುವಿನ ಹೆತ್ತವರ ವಿರೋಧದ ನಡುವೆಯೂ ಶಿವು ಹಿರೇಕೆರೂರ ಅವರ ಪುತ್ರಿ ಸಹನಾ ಮತ್ತು ನಿಖಿಲ್ ದಾಂಡೇಲಿ ಪರಸ್ಪರ ಪ್ರೀತಿಸಿ ಕಳೆದ ನಾಲ್ಕೈದು ತಿಂಗಳ ಹಿಂದೆ ಮದುವೆಯಾಗಿದ್ದರು. ಇವರ ಮದುವೆಯನ್ನು ಒಪ್ಪಿದ ವರನ ಪೋಷಕರು ಜೂ. 26ರ ಭಾನುವಾರದಂದು ಅದ್ದೂರಿ ಆರತಕ್ಷತೆಗೆ ತಯಾರಿ ನಡೆಸಿದ್ದರು. ಇದಕ್ಕೂ ಮುನ್ನ ಹೆತ್ತವರ ಆಶೀರ್ವಾದ ಪಡೆಯಲೆಂದು ಹುಬ್ಬಳ್ಳಿ ಅಕ್ಷಯ್ ಪಾರ್ಕ್ಗೆ ಸಹನಾ ತೆರಳಿದ್ದಳು. ಈ ವೇಳೆ ಆಕೆಯನ್ನು ಸಂಬಂಧಿಯೂ ಆಗಿರುವ ಕಾರ್ಪೋರೇಟರ್ ಚೇತನ ಹಿರೇಕೆರೂರ, ಆಕೆಯ ತಂದೆ ಶಿವು ಹಿರೇಕೆರೂರ ಮತ್ತು ಇನ್ನೊಬ್ಬ ವ್ಯಕ್ತಿ ಸೇರಿ ಮೂವರು ಕಿಡ್ನಾಪ್ ಮಾಡಿದ್ದಾರೆಂದು ಶುಕ್ರವಾರ ರಾತ್ರಿ ವರ ಹುಬ್ಬಳ್ಳಿಯ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.
ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.