ಕುಲು, ಜೂ 25 (DaijiworldNews/DB): ನಮಗೆ ರಾಜಕೀಯ ಮಾಡುವುದು ಹೇಗೆಂದು ಗೊತ್ತಿಲ್ಲ. ಅದಕ್ಕಾಗಿ ಅಧಿಕಾರಕ್ಕೆ ಬಂದಿಲ್ಲ. ಭ್ರಷ್ಟಾಚಾರ ತೊಡೆದು ಹಾಕಿ ಸುಸ್ಥಿರ ಆಡಳಿತ ನೀಡುವುದೊಂದೇ ನಮ್ಮ ಗುರಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಹೇಳಿದ್ದಾರೆ.
ಪಂಜಾಬ್ ಸಿಎಂ ಭಗವಂತ್ ಮಾನ್ ಅವರೊಂದಿಗೆ ಹಿಮಾಚಲ ಪ್ರದೇಶದ ಕುಲುವಿನಲ್ಲಿ ರೋಡ್ ಶೋ ನಡೆಸಿ ಮಾತನಾಡಿದ ಅವರು, ದೆಹಲಿಯಲ್ಲಿ ಭ್ರಷ್ಟಾಚಾರ ಕೊನೆಗೊಳಿಸಿದ್ದೇವೆ. ಪಂಜಾಬ್ನಲ್ಲಿ ಭ್ರಷ್ಟಾಚಾರ ನಿಯಂತ್ರಣ ಕೆಲಸ ಆರಂಭವಾಗಿದೆ. ತನ್ನದೇ ಸಂಪುಟದ ಸಚಿವ ಭ್ರಷ್ಟಾಚಾರ ಎಸಗಿರುವುದು ಗೊತ್ತಾದಾಗ ಆತನನ್ನು ರಕ್ಷಣೆ ಮಾಡದೆ ಜೈಲಿಗೆ ಕಳುಹಿಸಿದ ಸಿಎಂ ಭಗವಂತ ಮಾನ್. ವಿರೋಧ ಪಕ್ಷಗಳಿಗಾಗಲೀ, ಮಾಧ್ಯಮಗಳಿಗಾಗಲೀ ಅವರ ಭ್ರಷ್ಟಾಚಾರದ ವಿಷಯ ತಿಳಿದಿಲ್ಲವೆಂದು ಪ್ರಕರಣ ಮುಚ್ಚಿ ಹಾಕಬಹುದಿತ್ತು. ಆದರೆ ಹಾಗೆ ಮಾಡದೆ, ತಪ್ಪು ಕಂಡು ಬಂದಾಗ ಜೈಲಿಗೆ ಕಳುಹಿಸಿ ನಿಜವಾದ ಸಿಎಂ ಎಂದರೆ ಹೇಗಿರಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದವರು ತಿಳಿಸಿದರು.
ಅಣ್ಣಾ ಹಜಾರೆ ಅವರ ಚಳವಳಿಯಿಂದ ಆರಂಭವಾದ ನಮ್ಮ ಭ್ರಷ್ಟಾಚಾರ ನಿರ್ಮೂಲನೆಯ ಪಯಣ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿಯವರೆಗೆ ತಲುಪಿದೆ. ಭ್ರಷ್ಟಾಚಾರರಹಿತ ಆಡಳಿತದ ಮೂಲಮಂತ್ರದೊಂದಿಗೆ ಪಕ್ಷ ಸಾಗುತ್ತಿದೆ ಎಂದರು.