ಬೆಳಗಾವಿ, ಜೂ 25 (DaijiworldNews/DB): ಅಧಿಕಾರದ ಆಸೆಯಿಂದಾಗಿ ಮಹಾ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರು ಬಾಳಾ ಸಾಹೇಬ ಠಾಕ್ರೆ ಅವರ ವಿಚಾರಧಾರೆಗಳನ್ನು ಹಾಳುಗೆಡವಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ ಆರೋಪಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಹಿಂದುತ್ವದ ವಿಚಾರಧಾರೆಗಳನ್ನು ಶಿಸ್ತುಬದ್ದವಾಗಿ ಪಾಲಿಸುತ್ತಿದ್ದ ಬಾಳಾಸಾಹೇಬ ಅವರು ಹಿಂದುತ್ವವನ್ನೇ ಉಸಿರಾಗಿಸಿಕೊಂಡಿದ್ದರು. ಆದರೆ ಅವರ ಪುತ್ರ ಉದ್ದವ್ ಠಾಕ್ರೆ ಅವರು ಸ್ವಾರ್ಥ ಮತ್ತು ಮುಖ್ಯಮಂತ್ರಿ ಖುರ್ಚಿಗೆ ಕಟ್ಟುಬಿದ್ದು ತಂದೆಯವರ ವಿಚಾರಧಾರೆಗಳಿಗೆ ತಿಲಾಂಜಲಿ ಹಾಕಿದ್ದಾರೆ ಎಂದರು.
ಎನ್ಸಿಪಿ ಮತ್ತು ಕಾಂಗ್ರೆಸ್ ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನು ಮುಗಿಸಲು ಶತ ಪ್ರಯತ್ನ ಮಾಡುತ್ತಿವೆ.ಮೈತ್ರಿ ಸರ್ಕಾರದಲ್ಲಿ ಸ್ವಕ್ಷೇತ್ರಾಭಿವೃದ್ದಿಗೆ ಅನುದಾನ ನೀಡದ ಕಾರಣದಿಂದ ಶಾಸಕರು ಬೇಸರಗೊಂಡಿದ್ದಾರೆ. ಅದೇ ಶಾಸಕರು ಬಂಡಾಯ ಏಳಲು ಕಾರಣ ಎಂದವರು ತಿಳಿಸಿದರು.
ಏಕನಾಥ ಶಿಂಧೆ ಕೆಳಮಟ್ಟದಿಂದ ಬೆಳೆದ ನಾಯಕನಾದರೆ, ಸಂಜಯ್ ರಾವತ್ ಹಿಂಭಾಗಲಿನಿಂದ ಅಧಿಕಾರ ಪಡೆದುಕೊಂಡವರು. ಶಿಂಧೆ ಅವರಿಗೆ ಕಾರ್ಯಕರ್ತರು ಸದಾ ಬೆಂಬಲವಾಗಿ ನಿಂತಿದ್ದಾರೆ ಎಂದರು.