ನವದೆಹಲಿ, ಜೂ 25 (DaijiworldNews/DB): ಗುಜರಾತ್ ಗಲಭೆ ವಿಷಯದಲ್ಲಿ ಸತ್ಯವು ಹೊಳೆಯುವ ಚಿನ್ನದಂತೆ ಹೊರ ಬಂದಿದೆ. ಪ್ರಧಾನಿ ಮೋದಿಯವರು ವಿಷವನ್ನು ನುಂಗಿ ಗಂಟಲಿನಲ್ಲಿ ಹಿಡಿದಿಟ್ಟುಕೊಂಡ ಶಿವನಂತೆ ನೋವನ್ನು ಮೌನವಾಗಿಯೇ ಸಹಿಸಿಕೊಂಡಿದ್ದರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
2002 ರ ಗಲಭೆಯಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರ ಹಲವರಿಗೆ ಎಸ್ಐಟಿ ನೀಡಿದ್ದ ಕ್ಲೀನ್ ಚಿಟ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿರುವ ಅಮಿತ್ ಶಾ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದರು.
ಪ್ರಧಾನಿ ಮೇಲಿದ್ದ ಎಲ್ಲಾ ಆರೋಪಗಳು ರಾಜಕೀಯ ಪ್ರೇರಿತ ಎಂಬುದೂ ಸಾಬೀತಾಗಿದೆ. ಆದರೂ 19 ವರ್ಷಗಳ ಕಾಲ ಇಷ್ಟೆಲ್ಲ ಆರೋಪಗಳು ಬಂದಿದ್ದರೂ, ಯಾವುದೇ ಮಾತನ್ನಾಡದೆ ನೋವು ಸಹಿಸಿಕೊಂಡು ಪ್ರಧಾನಿಯವರು ಸುಮ್ಮನಿದ್ದರು. ಆದರೆ ಇದೀಗ ಹೊಳೆಯುವ ಚಿನ್ನದಂತೆ ಸತ್ಯ ಹೊರ ಬಂದಿದೆ. ತೀರ್ಪಿನಿಂದ ಸಂತಸವಾಗಿದೆ ಎಂದರು.
ಆರೋಪಗಳನ್ನು ಸಹಿಸಿಕೊಂಡು ಸದಾ ಸತ್ಯದ ಪರವಾಗಿರುವ ಮೋದಿಯವರು ತೀವ್ರ ನೋವು ಅನುಭವಿಸಿದರೂ ಅದನ್ನು ಸಹಿಸಿಕೊಂಡಿರುವುದನ್ನು ನಾನು ತೀರಾ ಹತ್ತಿರದಿಂದ ನೋಡಿದ್ದೇನೆ. ನ್ಯಾಯಾಂಗ ಪ್ರಕ್ರಿಯೆಯಲ್ಲಿ ಪ್ರಕರಣ ಇದ್ದ ಕಾರಣ ಅವರು ಏನೂ ಮಾತಾಡದೆ ಸುಮ್ಮನಿದ್ದರು. ದೃಢ ಹೃದಯದ ವ್ಯಕ್ತಿ ಮಾತ್ರ ಹೀಗಿರಲು ಸಾಧ್ಯ ಎಂದವರು ಬಣ್ಣಿಸಿದರು.
ಉನ್ನತ ನಾಯಕನೊಬ್ಬನನ್ನು ಬಲಿಪಶು ಮಾಡಲು ಯತ್ನಿಸಿದವರ ಪ್ರಯತ್ನವನ್ನು ನ್ಯಾಯಾಲಯ ಕಿತ್ತು ಹಾಕಿದೆ. ಸುಳ್ಳು ಆರೋಪಗಳನ್ನು ವಜಾಗೊಳಿಸಲಾಗಿದೆ ಎಂದು ಅಮಿತ್ ಶಾ ತಿಳಿಸಿದರು.
ಫೆಬ್ರವರಿ 28, 2002ರ ಗುಜರಾತ್ ಗಲಭೆಯಲ್ಲಿ 69 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದರಲ್ಲಿ ಕಾಂಗ್ರೆಸ್ನ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಅವರೂ ಮಡಿದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರ ಹಲವರಿಗೆ ವಿಶೇಷ ತನಿಖಾ ತಂಡವು ಕ್ಲೀನ್ ಚಿಟ್ ನೀಡಿತ್ತು. ಇದನ್ನು ಪ್ರಶ್ನಿಸಿ ಕಾಂಗ್ರೆಸ್ನ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಕಿಯಾ ಜಾಫ್ರಿ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿತ್ತು.