ಲಕ್ನೋ, ಜೂ 25 (DaijiworldNews/MS) : ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಯಾದ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವುದಾಗಿ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಶನಿವಾರ ಹೇಳಿದ್ದಾರೆ.
ಬುಡಕಟ್ಟು ನಾಯಕರಾದ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವ ನಿರ್ಧಾರವನ್ನು ಬಹುಜನ ಸಮಾಜ ಪಕ್ಷವು "ಬುಡಕಟ್ಟು ಸಮುದಾಯವನ್ನು ನಮ್ಮ ಚಳುವಳಿಯ ಪ್ರಮುಖ ಭಾಗವೆಂದು ಗುರುತಿಸಿದೆ" ಎಂದು ಅವರು ಹೇಳಿದ್ದಾರೆ
ಪ್ರತಿಪಕ್ಷಗಳು ತನ್ನನ್ನು ಸಂಪರ್ಕಿಸಿಲ್ಲ ಎಂದ ಅವರು, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮೊದಲ ಸಭೆಗೆ ಕೆಲವು ಆಯ್ದ ಪಕ್ಷಗಳನ್ನು ಮಾತ್ರ ಕರೆದಿದ್ದು ಶರದ್ ಪವಾರ್ ಕೂಡ ಬಿಎಸ್ಪಿಯನ್ನು ಚರ್ಚೆಗೆ ಕರೆಯಲಿಲ್ಲ ಎಂದು ದೂರಿದ್ದಾರೆ.
ಪ್ರತಿಪಕ್ಷಗಳು ತಮ್ಮ ಪಕ್ಷದ ವಿರುದ್ಧ ಜಾತಿವಾದಿ ಮನಸ್ಥಿತಿಯನ್ನು ಮುಂದುವರೆಸುತ್ತಿರುವುದರಿಂದ, ಬಿಎಸ್ಪಿ ರಾಷ್ಟ್ರಪತಿ ಚುನಾವಣೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರವಾಗಿದೆ ಎಂದು ಉತ್ತರಪ್ರದೇಶದ ಮಾಜಿ ಸಿಎಂ ಹೇಳಿದ್ದಾರೆ.
ಬಿಎಸ್ಪಿ ಉತ್ತರಪ್ರದೇಶದಲ್ಲಿ ಓರ್ವ ಶಾಸಕನನ್ನು ಹೊಂದಿದೆ. ಲೋಕಸಭೆಯಲ್ಲಿ 10 ಹಾಗೂ ರಾಜ್ಯಸಭೆಯಲ್ಲಿ 3 ಸಂಸದರನ್ನು ಹೊಂದಿದೆ. ರಾಜಸ್ಥಾನದಲ್ಲಿ 6 ಶಾಸಕರಿದ್ದರೂ ಅವರೆಲ್ಲರೂ 2019ರಲ್ಲಿ ಕಾಂಗ್ರೆಸ್ ನೊಂದಿಗೆ ವಿಲೀನರಾಗಿದ್ದಾರೆ.