ಬೆಂಗಳೂರು, ಜೂ 25 (DaijiworldNews/DB): ಮಳಲಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಮೂಲ ದಾವೆಯ ಸಿಂಧುತ್ವದ ಕುರಿತು ಸಿವಿಲ್ ನ್ಯಾಯಾಲಯವು ವಿಚಾರಣೆ ನಡೆಸುವುದರ ವಿರುದ್ದ ಆಕ್ಷೇಪ ವ್ಯಕ್ತಪಡಿಸಿ ಹೈಕೋರ್ಟ್ಗೆ ಸಲ್ಲಿಸಲಾದ ಅರ್ಜಿಯ ವಿಚಾರಣೆ ಪೂರ್ಣಗೊಂಡಿದ್ದು, ಕೋರ್ಟ್ ತೀರ್ಪು ಕಾಯ್ದಿರಿಸಿದೆ.
ತೆಂಕು ಉಳೆಪಾಡಿಯ ಧನಂಜಯ್ ಹಾಗೂ ಬಡಗು ಉಳೆಪಾಡಿಯ ಮನೋಜ್ಕುಮಾರ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾ. ಸಚಿನ್ ಶಂಕರ್ ಮಗದಂ ಅವರಿದ್ದ ಏಕಸದಸ್ಯ ಪೀಠ ತೀರ್ಪನ್ನು ಕಾಯ್ದಿರಿಸಿದೆ.
ಅಸಲಿ ದಾವೆಯ ಸಿಂಧುತ್ವ ಈಗಾಗಲೇ ಸಲ್ಲಿಕೆಯಾಗಿದ್ದು, ಇದರ ಕುರಿತು ವಾದ-ಪ್ರತಿವಾದಗಳನ್ನು ಆಲಿಸಲಾಗಿದೆ. ಆದರೆ ಆದೇಶ ಹೊರಡಿಸಬಾರದೆಂಬ ಆದೇಶ ಮುಂದುವರಿಯಲಿದೆ ಎಂದು ನ್ಯಾಯಪೀಠ ಹೇಳಿದೆ. ವಕ್ಫ್ ಮಂಡಳಿ ಪರ ವಾದ ಮಂಡಿಸಿದ್ದ ಜಯಕುಮಾರ್ ಎಸ್. ಪಾಟೀಲ್, ಅಸಲಿ ದಾವೆಯನ್ನು ಆಲಿಸಲು ವಿಚಾರಣಾ ನ್ಯಾಯಾಲಯದ ಅಧಿಕಾರ ವ್ಯಾಪ್ತಿ ನಿರ್ಧರಿತವಾಗುವ ಮುನ್ನ ಆಯುಕ್ತರ ವರದಿ ಅಗತ್ಯವಿರುವುದಿಲ್ಲ. ಒಂದು ವೇಳೆ ಕಮಿಷನರ್ ನೇಮಕ ಆದ ಬಳಿಕ ವರದಿ ಬಂದ ನಂತರ ಸಿಂಧುತ್ವದ ವಿಚಾರಣೆ ನಡೆದರೆ ಮತ್ತು ತೀರ್ಪು ವ್ಯತಿರಿಕ್ತವಾಗಿ ಬಂದರೆ ಆಯುಕ್ತರ ನೇಮಕವೂ ಮಾನ್ಯತೆ ಪಡೆದುಕೊಳ್ಳುವುದಿಲ್ಲ. ಹಾಗೆಯೇ ವರದಿ ಕೂಡಾ. ಹೀಗಾಗಿ ಮೊದಲು ಅಸಲಿ ದಾವೆ ಸಿಂಧುತ್ವದ ಬಗ್ಗೆಯೇ ತೀರ್ಮಾನ ಕೈಗೊಳ್ಳಬೇಕುಯ ಎಂದರು.
ಅರ್ಜಿದಾರರ ಪರ ವಾದ ಮಂಡಿಸಿದ ವಿವೇಕ್ ಸುಬ್ಬಾ ರೆಡ್ಡಿ, ಸ್ಥಳ ಪರಿಶೀಲನೆ ನಡೆದು ಎಲ್ಲಾ ಮಾಹಿತಿಗಳನ್ನು ವೈಜ್ಞಾನಿಕವಾಗಿ ಪಡೆದುಕೊಂಡರೆ ಮಾತ್ರ ಕಟ್ಟಡದ ಐತಿಹಾಸಿಕ ಮಾಹಿತಿ ಮತ್ತು ಪುರಾತನ ಮಾಹಿತಿಗಳು ಗೊತ್ತಾಗುತ್ತದೆ. ಅಸಲು ದಾವೆ ಮತ್ತು ಸ್ಥಳ ಪರಿಶೀಲನೆ ವಿಚಾರದಂತಹ ಸಂದರ್ಭ ಬಂದಾಗ ಯಾವುದಕ್ಕೆ ಮೊದಲ ಮಾನ್ಯತೆ ನೀಡಬೇಕೆಂಬುದನ್ನು ಕಾನೂನಿನಲ್ಲಿ ಹೇಳಿಲ್ಲಎಂದು ವಾದಿಸಿದರು.