ಮುಂಬೈ, ಜೂ 25 (DaijiworldNews/MS) : ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ನಿರ್ದೇಶಕ ಮತ್ತು ಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಎನ್ಡಿಎಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಕುರಿತು ಮಾಡಿರುವ ಟ್ವೀಟ್ ಮತ್ತೊಂದು ವಿವಾದ ಸೃಷ್ಟಿಸಿದೆ.
ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಕುರಿತು ವರ್ಮಾ ಮಾಡಿರುವ ಟ್ವೀಟ್ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಪೊಲೀಸ್ ದೂರು ದಾಖಲಿಸಿದೆ.
ಬಿಜೆಪಿ ನಾಯಕರಾದ ಗುಡೂರು ನಾರಾಯಣ ರೆಡ್ಡಿ ಮತ್ತು ಟಿ.ನಂದೇಶ್ವರ್ ಗೌಡ್ ರಾಮ್ ಗೋಪಾಲ್ ವರ್ಮಾ ವಿರುದ್ಧ ಹೈದರಾಬಾದ್ನ ಅಬಿಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, ಆದರೆ ವರ್ಮಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು ಇದರಲ್ಲಿ ತಪ್ಪೇನಿದೆ ಎಂದು ಕೇಳಿದ್ದಾರೆ.
ರಾಮ್ ಗೋಪಾಲ್ ಅವರು ಜೂನ್ 22 ರಂದು ಮಾಡಿರುವ ವಿವಾದಾತ್ಮಕ ಟ್ವೀಟ್ ನಲ್ಲಿ "ದ್ರೌಪದಿ ರಾಷ್ಟ್ರಪತಿಯಾಗಿದ್ದರೆ ಪಾಂಡವರು ಯಾರು? ಮತ್ತು ಅದಕ್ಕಿಂತ ಮುಖ್ಯವಾಗಿ ಕೌರವರು ಯಾರು?" ಎಂದಿದ್ದು ಇದು ಬಿಜೆಪಿಯವರನ್ನು ಕೆರಳಿಸಿದ್ದು ಭಾರೀ ವಿವಾದ ಸೃಷ್ಟಿಸಿತ್ತು.
ನಾನೇನು ಇದನ್ನು ವ್ಯಂಗ್ಯವಾಗಿ ಹೇಳಿಲ್ಲ. ಮಹಾಭಾರತದಲ್ಲಿ ದ್ರೌಪದಿ ನನಗೆ ಬಹಳ ಇಷ್ಟವಾದ ಪಾತ್ರ, ಆದರೆ ಆ ಹೆಸರನ್ನು ಇಟ್ಟುಕೊಳ್ಳುವವರ ಸಂಖ್ಯೆ ಕಡಿಮೆ..ಹೀಗಾಗಿ ಆ ಹೆಸರು ಕೇಳಿದೊಡನೆ ಮಹಾಭಾರತದ ಪಾತ್ರವನ್ನು ನೆನಪಿಸಿಕೊಂಡೆ ಎಂದು ಹೇಳಿದ್ದು ಬೇರೆ ಯಾವ ಉದ್ದೇಶವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.