ಮುಂಬೈ, ಜೂ 24 (DaijiworldNews/SM): ಮಹಾರಾಷ್ಟ್ರದಲ್ಲಿ ರಾಜಕೀಯ ಬೆಳವಣಿಗೆ ಕ್ಷಣಕ್ಷಣಕ್ಕೂ ಕುತೂಹಲದ ಕಣವಾಗುತ್ತಿದೆ. ತನ್ನ ಶಾಸಕರ ಗುಂಪಿಗೆ 'ಪ್ರಬಲ ರಾಷ್ಟ್ರೀಯ ಪಕ್ಷ'ವೊಂದು ಬೆಂಬಲ ನೀಡುತ್ತಿದೆ ಎಂದು ಗುರುವಾರ ಹೇಳಿಕೆ ನೀಡಿದ್ದ ಬಂಡಾಯ ಶಾಸಕರ ಗುಂಪಿನ ನಾಯಕ ಏನಕಾಥ್ ಶಿಂಧೆ ಶುಕ್ರವಾರ ಯೂ ಟರ್ನ್ ಹೊಡೆದಿದ್ದಾರೆ. ತಾವು ಯಾವುದೇ ರಾಷ್ಟ್ರೀಯ ಪಕ್ಷದೊಂದಿಗೆ ಸಂಪರ್ಕ ಹೊಂದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಬಿಜೆಪಿ ತನ್ನ ಬಂಡಾಯ ಶಾಸಕರಿಗೆ ಬೆಂಬಲ ನೀಡುತ್ತಿದೆಯೇ ಎಂಬ ಪ್ರಶ್ನೆಗೆ, ಶಿಂಧೆ ಪ್ರತಿಕ್ರಿಯೆ ನೀಡಿದ್ದು, "ದೊಡ್ಡ ಶಕ್ತಿಯು ನಮ್ಮನ್ನು ಬೆಂಬಲಿಸುತ್ತಿದೆ ಎಂದು ಹೇಳಿಕೆ ನೀಡಿದ್ದು, ಬಾಳಾಸಾಹೇಬ್ ಠಾಕ್ರೆ ಮತ್ತು ಆನಂದ್ ದಿಘೆ ಅವರ ಶಕ್ತಿ ಎನ್ನುವ ಅರ್ಥದಲ್ಲಿ ಎಂದು ತಮ್ಮ ಹೇಳಿಕೆಗೆ ಸಮರ್ಥನೆ ನೀಡಿದ್ದಾರೆ."
ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಯಾವಾಗ ಕೊನೆಗೊಳ್ಳುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಶಿಂಧೆ, ಕೆಲವೇ ದಿನಗಳಲ್ಲಿ ಎಲ್ಲವೂ ಸ್ಪಷ್ಟವಾಗುತ್ತದೆ ಎಂದು ಹೇಳಿದ್ದಾರೆ. "ಶಿವಸೇನೆಯ 55 ಶಾಸಕರಲ್ಲಿ 40 ಮಂದಿ ನನ್ನೊಂದಿಗೆ ಗುವಾಹಟಿಗೆ ಬಂದಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಬಹುಮತ ಮತ್ತು ಸಂಖ್ಯೆಗಳು ಎಣಿಕೆಯಾಗುತ್ತವೆ. ಆದ್ದರಿಂದ ನಮ್ಮ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವ ಹಕ್ಕು ಯಾರಿಗೂ ಇಲ್ಲ" ಎಂದು ಶಿಂಧೆ ಹೇಳಿದರು. ರಾಷ್ಟ್ರೀಯ ಪಕ್ಷದ ಬೆಂಬಲದ ಬಗ್ಗೆ ಮಾತನಾಡಿದ್ದ ಶಿಂಧೆ ಗುರುವಾರ ಸಂಜೆ ಶಿಂಧೆ ಅವರ ಸಹಾಯಕರು ಬಿಡುಗಡೆ ಮಾಡಿದ ವೀಡಿಯೊದಲ್ಲಿ ಅವರು ಬಂಡಾಯ ಶಾಸಕರನ್ನು ಉದ್ದೇಶಿಸಿ ಮಾತನಾಡುತ್ತಿರುವುದನ್ನು ನೋಡಬಹುದಾಗಿದೆ.
"ಏನೇ ಆಗಲಿ ನಾವು ಗೆಲ್ಲುತ್ತೇವೆ, ಸೂಪರ್ ಪವರ್ ರಾಷ್ಟ್ರೀಯ ಪಕ್ಷವೊಂದು ನಮ್ಮ ಬೆಂಬಲಕ್ಕೆ ಇದೆ, ಪಾಕಿಸ್ತಾನ ಏನಾಯಿತು ಎಂದು ನಿಮಗೆ ತಿಳಿದಿದೆ" ಎಂದು ಶಿಂಧೆ ಹೇಳಿದ್ದಾರೆ. "ನಾವು ತೆಗೆದುಕೊಂಡ ನಿರ್ಧಾರ ಐತಿಹಾಸಿಕ ಎಂದು ರಾಷ್ಟ್ರೀಯ ಪಕ್ಷದ ಮುಖಂಡರು ನನಗೆ ಹೇಳಿದ್ದಾರೆ, ನಮ್ಮ ಎಲ್ಲಾ ಶಕ್ತಿ ನಿಮ್ಮಲ್ಲಿದೆ, ನಿಮಗೆ ಏನಾದರೂ ಅಗತ್ಯವಿದ್ದರೆ, ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಹೇಳಿದ್ದಾರೆ.