ಕೇರಳ, ಜೂ 24 (DaijiworldNews/DB): ಕೇರಳದ ವಯನಾಡಿನಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಂಸದ ಕಚೇರಿಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ಶುಕ್ರವಾರ ನಡೆದಿದೆ. ಘಟನೆಯಲ್ಲಿ ಎಸ್ಎಫ್ಐ ಪಾತ್ರವಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕೇರಳದ ಗುಡ್ಡಗಾಡು ಪ್ರದೇಶಗಳಲ್ಲಿ ಅರಣ್ಯಗಳ ಸುತ್ತ ಬಫರ್ ವಲಯ ನಿರ್ಮಿಸುವ ವಿಷಯದಲ್ಲಿ ಸಂಸದ ರಾಹುಲ್ ಗಾಂಧಿಯವರು ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ಆರೋಪಿಸಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾದ ಕಾರ್ಯಕರ್ತರು ಶುಕ್ರವಾರ ವಯನಾಡ್ನ ಕಲ್ಪೆಟ್ಟಾದಲ್ಲಿರುವ ಸಂಸದ ರಾಹುಲ್ ಗಾಂಧಿಯವರ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿತ್ತು. ಆದರೆ ಈ ವೇಳೆ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ರಾಹುಲ್ ಕಚೇರಿಯನ್ನು ದ್ವಂಸ ಮಾಡಿದ್ದಾರೆ ಎಂಬುದಾಗಿ ಕಾಂಗ್ರೆಸ್ ನಾಯಕರು ಆಪಾದಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ನ ಹಿರಿಯ ನಾಯಕ ಶಶಿ ತರೂರ್, ಕಚೇರಿ ಧ್ವಂಸದ ವೀಡಿಯೋವನ್ನು ಹಂಚಿಕೊಂಡು, ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರನ್ನು ಟ್ಯಾಗ್ ಮಾಡಿದ್ದಾರೆ. ಅಲ್ಲದೆ, ಘಟನೆಯಲ್ಲಿ ಎಸ್ಎಫ್ಐ ಪಾತ್ರವಿದೆ. ಸಿಪಿಐ(ಎಂ) ಕಾರ್ಯಕರ್ತರು ಕೂಡಾ ಭಾಗಿಯಾಗಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಇನ್ನು ಕಚೇರಿ ಧ್ವಂಸದ ವೇಳೆ ಸುಮಾರು 100 ಮಂದಿ ಕಾರ್ಯಕರ್ತರು ಸ್ಥಳದಲ್ಲಿದ್ದರು. ಎಂಟು ಮಂದಿಯನ್ನು ಬಂಧಿಸಲಾಗಿದ್ದು, ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿರುವುದಾಗಿ ವರದಿಯಾಗಿದೆ.