ಶಿವಮೊಗ್ಗ, ಜೂ 24 (DaijiworldNews/DB): ದೇಶದಲ್ಲಿ ತಮ್ಮನ್ನು ಬಿಟ್ಟು ಬೇರಾರು ಸರಿಯಿಲ್ಲ ಎಂದು ಸಿದ್ದರಾಮಯ್ಯ ಅಂದುಕೊಂಡಿದ್ದಾರೆ. ಹಾಗಾಗಿ ಎಲ್ಲರನ್ನೂ ಟೀಕಿಸುತ್ತಲೇ ಇರುತ್ತಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ರಾಷ್ಟ್ರಪತಿ ಚುನಾವಣೆಗೆ ಎನ್ ಡಿಎ ಅಭ್ಯರ್ಥಿ ಕುರಿತು ಸಿದ್ದರಾಮಯ್ಯ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಎಲ್ಲರನ್ನು ಟೀಕಿಸುವುದರಲ್ಲಿಯೇ ಕಾಲ ಕಳೆಯುವ ರಾಜಕಾರಣಿಯೊಬ್ಬರು ದೇಶದಲ್ಲಿ ಇದ್ದಾರೆಂದರೆ ಅದು ಸಿದ್ದರಾಮಯ್ಯ ಮಾತ್ರ. ತಾವೊಬ್ಬ ಸರಿ, ಉಳಿದವರಾರೂ ಸರಿಯಿಲ್ಲ ಎಂಬ ನಿಲುವು ಅವರದು. ಕಾಂಗ್ರೆಸ್ ಚುನಾವಣೆಯಲ್ಲಿ ಸೋಲುತ್ತದೆ ಎಂಬುದು ಅವರಿಗೂ ಗೊತ್ತು. ಅದಕ್ಕಾಗಿ ಟೀಕಿಸುವುದರಲ್ಲಿಯೇ ಕಾಲ ಕಳೆಯುತ್ತಾರೆ ಎಂದರು.
ಪಿಎಸ್ಐ ಹುದ್ದೆಗೆ ಆಯ್ಕೆಗೆ ಮರುಪರೀಕ್ಷೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ತನಿಖೆ ಪೂರ್ಣಗೊಂಡ ಬಳಿಕ ದಿನಾಂಕ ಪ್ರಕಟಿಸಲಾಗುವುದು ಎಂದ ಅವರು, ಪ್ರಕರಣದಲ್ಲಿ ಯಾರನ್ನೂ ಕೈ ಬಿಡುವಂತೆ ಯಾರ ಒತ್ತಡವೂ ಇಲ್ಲ. ಮುಕ್ತ ಅವಕಾಶದಿಂದ ಸಿಐಡಿ ತನಿಖೆ ಮಾಡುತ್ತಿದೆ ಎಂದು ತಿಳಿಸಿದರು.