ನವದೆಹಲಿ, ಜೂ 24 (DaijiworldNews/DB): ನೀವು ಬಿಜೆಪಿಯೊಂದಿಗೆ ವಿಲೀನವಾಗಿ. ನಾವು ಮತ್ತೆ ಹೊಸದಾಗಿ ಶಿವಸೇನೆಯನ್ನು ಕಟ್ಟುತ್ತೇವೆ ಎಂದು ಬಂಡಾಯ ಶಾಸಕರಿಗೆ ಶಿವಸೇನಾ ವಕ್ತಾರ ಸಂಜಯ್ ರಾವತ್ ಸಂದೇಶ ರವಾನಿಸಿದ್ದಾರೆ.
ಏಕನಾಥ್ ಶಿಂಧೆ ನೇತೃತ್ವದಲ್ಲಿ ಕೆಲವು ಶಾಸಕರು ಬಂಡಾಯ ಎದ್ದಿರುವ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ಮಂದಿ ಬಾಳಾ ಸಾಹೇಬ್ ಠಾಕ್ರೆ ಅವರ ಕಾಲದಲ್ಲಿಯೂ ಪಕ್ಷದಿಂದ ಹೊರ ಹೋಗಿದ್ದಾರೆ. ಆದರೆ ನಾವು ಸುಮ್ಮನೆ ಕುಳಿತುಕೊಳ್ಖದೆ ಮತ್ತೆ ಪಕ್ಷ ಕಟ್ಟಿ ಅಧಿಕಾರಕ್ಕೆ ಬರುವಂತೆ ಮಾಡಿದ್ದೇವೆ. ಅದೇ ರೀತಿಯಲ್ಲಿ ಈಗಲೂ ಮಾಡುತ್ತೇವೆ. ಅವರು ಬಿಜೆಪಿಯೊಂದಿಗೆ ವಿಲೀನವಾದರೂ ನಾವು ಮತ್ತೆ ಫೀನಿಕ್ಸ್ನಂತೆ ಮೇಲೆದ್ದು ಬಂದು ಪಕ್ಷ ಕಟ್ಟುತ್ತೇವೆ. ಈ ಭೂಮಿ ಶಿವಸೇನೆ ಮತ್ತು ಬಾಳಾ ಸಾಹೇಬರಿಗೇ ಸೇರಿದ್ದಾಗಿದೆ ಎಂದರು.
ಬಂಡಾಯ ಎದ್ದ ಶಾಸಕರೆಲ್ಲರೂ ನಮ್ಮ ಸ್ನೇಹಿತರೇ. ಅವರಿಗೆ ಯಾವ ರೀತಿಯ ಒತ್ತಡ ಇದೆ ಎಂಬುದು ಗೊತ್ತಿಲ್ಲ. ಅವರು ಬಂಡಾಯ ಎದ್ದಿದ್ದಾರೆಂಬ ಕಾರಣಕ್ಕೆ ಪಕ್ಷವೇ ಬಿದ್ದು ಹೋಗಿದೆ ಎಂದರ್ಥವಲ್ಲ. ನಾವೆಲ್ಲರೂ ಉದ್ದವ್ ಠಾಕ್ರೆ ಜೊತೆಗಿದ್ದೇವೆ. ಎಲ್ಲಾ ಶಾಸಕರು ಮೊದಲು ಸದನಕ್ಕೆ ಬರಲಿ. ಆಮೇಲೆ ನೋಡುತ್ತೇವೆ ಎಂಂದವರು ತಿಳಿಸಿದರು.
ನಾವು ಸರ್ಕಾರ, ಅಧಿಕಾರ, ಸ್ಥಾನ ಕಳೆದುಕೊಳ್ಳಬಹುದು. ಇಡಿ, ಸಿಬಿಐನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿಯವರು ನಮ್ಮನ್ನು ಜೈಲಿಗೆ ಕೂಡಾ ಹಾಕಬಹುದು. ಆದರೆ ಅವ ಯಾವುದೇ ಕುತಂತ್ರಗಳಿಗೆ ನಾವು ಹೆದರುವುದಿಲ್ಲ ಎಂದು ಇದೇ ವೇಳೆ ಸಂಜಯ್ ರಾವತ್ ಬಿಜೆಪಿ ವಿರುದ್ದ ಕಿಡಿಕಾರಿದರು.