ನವದೆಹಲಿ, ಜೂ 24 (DaijiworldNews/DB): ಹಲವು ಬದಲಾವಣೆಗಳೊಂದಿಗೆ ಜುಲೈ 1ರಿಂದ ಹೊಸ ಕಾರ್ಮಿಕ ನೀತಿ ಜಾರಿಗೊಳ್ಳಲಿದ್ದು, ಇದರ ಪ್ರಕಾರ ಪಿಎಫ್ ಮೊತ್ತ ಹೆಚ್ಚಳವಾದರೆ, ಟೇಕ್ ಹೋಂ ಸಾಲರಿಯಲ್ಲಿ ಇಳಿಕೆಯಾಗಲಿದೆ.
ಈಗಾಗಲೇ ಕೇಂದ್ರದ ಈ ಹೊಸ ನೀತಿಯನ್ನು 23 ರಾಜ್ಯಗಳು ಅಳವಡಿಸಿಕೊಂಡಿವೆ. ಹೊಸ ನೀತಿ ಪ್ರಕಾರ ಹಾಲಿ ಇರುವ ಕೆಲಸದ ಅವಧಿ 9 ಗಂಟೆಯಿಂದ 12 ಗಂಟೆಗೆ ಏರಿಕೆಯಾಗಲಿದೆ. ಹೀಗೆ ಮಾಡಿದ್ದಲ್ಲಿ ವಾರಕ್ಕೆ ಮೂರು ರಜೆ ನೀಡುವುದು ಕಡ್ಡಾಯವಾಗಲಿದೆ. ಆದರೆ ವಾರಕ್ಕೆ ಒಟ್ಟು ಕೆಲಸದ ಅವಧಿ ಈ ಹಿಂದಿನಂತೆ ಒಟ್ಟು 48 ಗಂಟೆಗಳೇ ಇರುತ್ತವೆ. ಕಂಪೆನಿಗಳು ಇದಕ್ಕೆ ಒಪ್ಪಿಕೊಂಡಲ್ಲಿ ಹೊಸ ಬದಲಾವಣೆ ಇನ್ನು ಮುಂದೆ ಅನ್ವಯವಾಗಲಿವೆ. ವೇತನದಲ್ಲಿಯೂ ಭಾರೀ ಬದಲಾವಣೆಯಾಗಲಿದ್ದು, ಕೈಗೆ ಸಿಗುವ ಸಂಬಳದ ಮೊತ್ತ ಕಡಿಮೆಯಾಗಲಿದೆ.ಆದರೆ ಭವಿಷ್ಯ ನಿಧಿ ಕೊಡುಗೆ ಹೆಚ್ಚಾಗಲಿದೆ. ಒಟ್ಟು ವೇತನದ ಶೇ. 50ರಷ್ಟಾದರೂ ಮೂಲ ವೇತನ ಇರಬೇಕೆಂಬ ಉದ್ದೇಶದಿಂದ ನಿಯಮದಲ್ಲಿ ಈ ತಿದ್ದುಪಡಿ ಮಾಡಲಾಗಿದೆ. ಆದರೆ ಗ್ರಾಚ್ಯುಟಿ ಮತ್ತು ನಿವೃತ್ತ ಕೊಡುಗೆಗಳ ಮೊತ್ತದಲ್ಲಿ ಹೆಚ್ಚಳವಾಗಲಿದೆ. ಇನ್ನು ಹೊಸ ಕಾರ್ಮಿಕ ನೀತಿಯು ವರ್ಕ್ ಫ್ರಂ ಹೋಮ್ ಗೆ ಪ್ರೋತ್ಸಾಹ ನೀಡಿದೆ.
ವಾರದಲ್ಲಿ ನಾಲ್ಕು ದಿನ ಕೆಲಸ ಮಾಡುವ ನಿಯಮ ವಿಶ್ವದ ವಿವಿಧ ದೇಶಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿದೆ. ಆದರೆ ಭಾರತದಲ್ಲಿ ಇದರ ಅಳವಡಿಕೆ ಕಷ್ಟ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಕಾರ್ಖಾನೆಗಳ ಕಾಯ್ದೆಯಡಿ ನೋಂದಣಿಯಾದ ಕಂಪನಿಗಳು ದಿನಕ್ಕ 8-9 ಗಂಟೆಗಿಂತ ಹೆಚ್ಚು ಕೆಲಸ ಮಾಡಿದ ಉದ್ಯೋಗಿಗೆ ಓಟಿ ನೀಡಬೇಕೆಂಬ ನಿಯಮ ಜಾರಿಯಲ್ಲಿದೆ. ಹೀಗಾಗಿ ನೂತನ ನಿಯಮವನ್ನು ಅಳವಡಿಸಿಕೊಳ್ಳುವುದು ಸಾಧ್ಯವೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.