ಬೆಳಗಾವಿ, ಜೂ 24 (DaijiworldNews/MS): ಏಳು ನವಜಾತ ಶಿಶುಗಳ ಮೃತದೇಹ ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆ ಮೂಡಲಗಿ ಪಟ್ಟಣದಲ್ಲಿ ನಡೆದಿದೆ.
ಮೂಡಲಗಿ ಬಸ್ ನಿಲ್ದಾಣದ ಬಳಿ ಇರುವ ಹಳ್ಳದಲ್ಲಿ ನವಜಾತ ಶಿಶುಗಳನ್ನು ಡಬ್ಬದಲ್ಲಿ ಹಾಕಿ ಎಸೆದಿದ್ದಾರೆ. ಶಿಶುಗಳ ಮೃತ ದೇಹ ಕಂಡು ಮೂಡಲಗಿಯ ಜನ ಗಾಬರಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಯಾರು ಈ ನವಜಾತ ಶಿಶುಗಳ ಶವಗಳನ್ನು ಎಸೆದರು, ಯಾಕಾಗಿ ಡಬ್ಬದಲ್ಲಿ ತುಂಬಿ ಎಸೆದಿದ್ದಾರೆ ಎಂಬ ಮಾಹಿತಿ ಇಲ್ಲ.
ಇನ್ನು ಪ್ರಕರಣ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಬೆಳಗಾವಿ ಡಿಹೆಚ್ಒ ಡಾ.ಮಹೇಶ್ ಕೋಣಿ, ಡಬ್ಬದಲ್ಲಿ ತುಂಬಿ ಬಿಸಾಕಿದ ಮಾದರಿಯಲ್ಲಿ ನವಜಾತ ಶಿಶುಗಳ ಮೃತ ದೇಹ ಪತ್ತೆಯಾಗಿವೆ. ಐದು ತಿಂಗಳು ತುಂಬಿದ ಭ್ರೂಣಗಳನ್ನು ಗಮನಿಸಿದರೆ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣದ ಶಂಕೆ ಕಂಡು ಬರುತ್ತಿದೆ.ಸ್ಥಳೀಯ ಆರೋಗ್ಯಾಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿದ್ದೇವೆ. ಪಂಚಾಯಿತಿ ಕಡೆಯಿಂದ ಪೊಲೀಸರಿಗೆ ದೂರು ನೀಡಲಾಗುವುದು. ಮೃತದೇಹಗಳನ್ನು ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.ಅವುಗಳನ್ನ ಬೆಳಗಾವಿಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ತಂದು ಪರೀಕ್ಷೆ ನಡೆಸಲಾಗುವುದು. ಇದನ್ನ ಯಾರು ಮಾಡಿದ್ದಾರೆ, ಎಲ್ಲಿಂದ ಬಂದಿದ್ದು ಎಂಬ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ತನಿಖೆ ಮಾಡಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ.