ಬೆಂಗಳೂರು, ಜೂ 24 (DaijiworldNews/DB): ಫ್ಲೆಕ್ಸ್ ಅಳವಡಿಕೆಗೆ ಹೈಕೋರ್ಟ್ ನಿಷೇಧ ವಿಧಿಸಿದ್ದರೂ ಪ್ರಧಾನಿ ಮೋದಿ ರಾಜ್ಯ ಭೇಟಿ ಸಮಯದಲ್ಲಿ ಬೆಂಗಳೂರಿನಲ್ಲಿ ಫ್ಲೆಕ್ಸ್ ಬೋರ್ಡ್ ಹಾಕಿದವರ ವಿರುದ್ದ ಯಾವುದೇ ಕ್ರಮಕ್ಕೆ ಮುಂದಾಗದ ಬಿಬಿಎಂಪಿ ವಿರುದ್ದ ಕಾಂಗ್ರೆಸ್ ಕಿಡಿಕಾರಿದೆ. ಪ್ರಧಾನಿಯವರು ತುರ್ತು ಸಂದರ್ಭದಲ್ಲಿ ಭೇಟಿ ನೀಡಿರುವುದೇ ಎಂದು ಪ್ರಶ್ನಿಸಿದೆ.
ಈ ಕುರಿತು #WhyBJPWhy ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ತುರ್ತು ಸಂದರ್ಭಗಳಲ್ಲಿ ಫ್ಲೆಕ್ಸ್ ಹಾಕಲು ಅನುಮತಿ ನೀಡಬೇಕಾಗುತ್ತದೆ ಎಂಬುದಾಗಿ ಬಿಬಿಎಂಪಿ ಆಯುಕ್ತರು ಹೇಳುತ್ತಾರೆ. ಹಾಗಾದರೆ ಪ್ರಧಾನಿಯವರು ತುರ್ತು ಸಂದರ್ಭದಲ್ಲಿ ರಾಜ್ಯ ಭೇಟಿ ನೀಡಿದ್ದಾರೆಯೇ? ಎಂದು ಪ್ರಶ್ನೆ ಮಾಡಿದೆ.
ಪ್ರಧಾನಿ ಮೋದಿ ಅವರನ್ನು ರಾಜ್ಯಕ್ಕೆ ಸ್ವಾಗತಿಸಲು 16 ಸಾವಿರ ಫ್ಲೆಕ್ಸ್ ಬೋರ್ಡ್ಗಳನ್ನು ಬಿಜೆಪಿ ಅಳವಡಿಸಿತ್ತು. ಇದಕ್ಕೆ ಬಿಬಿಎಂಪಿಯಿಂದ ಅನುಮತಿಯನ್ನೂ ಪಡೆದುಕೊಂಡಿರಲಿಲ್ಲ. ಹೀಗಿದ್ದಾಗ್ಯೂ ಬಿಬಿಎಂಪಿ ಕ್ರಮಕ್ಕೆ ಮುಂದಾಗದಿರುವುದಕ್ಕೆ ಕಾರಣವೇನು ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.