ಬೆಂಗಳೂರು, ಜೂ 24 (DaijiworldNews/MS): ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿದೆ ಎಂದಿದ್ದ ಸಚಿವ ಉಮೇಶ ಕತ್ತಿ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, "ಲೋಕಸಭಾ ಚುನಾವಣೆಯ ನಂತರ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿದೆ ಎಂದಿರುವ ಸಚಿವ ಉಮೇಶ್ ಕತ್ತಿ ಅವರನ್ನು ಮುಖ್ಯಮಂತ್ರಿಗಳು ಈ ಕೂಡಲೇ ಸಂಪುಟದಿಂದ ವಜಾ ಮಾಡಬೇಕು. ಸಚಿವರು ಏಕೀಕೃತ ಕರ್ನಾಟಕದ ವಿರುದ್ಧ ಕತ್ತಿ ಬೀಸುತ್ತಲೇ ಇದ್ದರೂ ತುಟಿ ಬಿಚ್ಚದ ಬಿಜೆಪಿ ಸರ್ಕಾರಕ್ಕೆ ನಾಚಿಕೆಯಾಗಬೇಕು" ಎಂದು ವಾಗ್ದಾಳಿ ಮಾಡಿದ್ದಾರೆ.
"ಕರ್ನಾಟಕದಲ್ಲಿ ಹುಟ್ಟಿ ಇದೇ ನೆಲದ ನೀರು,ಅನ್ನ ಸೇವಿಸಿ ಈಗ ಇದೇ ನೆಲಕ್ಕೆ ಬಿಜೆಪಿ ನಾಯಕರು ದ್ರೋಹ ಬಗೆಯುತ್ತಿದ್ದಾರೆ.ತಾಯಿ ನೆಲವನ್ನು ಅವಮಾನಿಸುವುದು ಒಂದೇ, ಹೆತ್ತ ತಾಯಿಯನ್ನು ಅವಮಾನಿಸುವುದು ಒಂದೇ. ಉ.ಕರ್ನಾಟಕ ಇಂದಿಗೂ ಎಂದಿಗೂ ಕರ್ನಾಟಕದ ಭಾಗವಾಗೇ ಉಳಿಯುತ್ತದೆ. ಕರ್ನಾಟಕದಿಂದ ಬೇರ್ಪಡಿಸಲು ಸಾಧ್ಯವೇ ಇಲ್ಲ. ಇದು ಕಾಂಗ್ರೆಸ್ ಪ್ರತಿಜ್ಞೆ"ಎಂದು ಡಿಕೆಶಿ ಹೇಳಿದ್ದಾರೆ.