ನವದೆಹಲಿ, ಜೂ 24 (DaijiworldNews/HR): ರೈಲ್ವೆ ಹಳಿಗೆ ವ್ಯಕ್ತಿಯೋರ್ವ ಆಯತಪ್ಪಿ ಬಿದ್ದಿದ್ದು, ರೈಲ್ವೇ ಉದ್ಯೋಗಿ ಪ್ರಾಣ ಪಣಕ್ಕಿಟ್ಟು ಆತನನ್ನು ರಕ್ಷಿಸಿದ ಘಟನೆ ನಡೆದಿದ್ದು, ಈ ಘಟನೆಯ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಘಟನೆಯ ವಿಡಿಯೋವನ್ನು ರೈಲ್ವೆ ಸಚಿವಾಲಯ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, 24 ಸೆಕೆಂಡುಗಳ ಸಿಸಿಟಿವಿ ದೃಶ್ಯದಲ್ಲಿ, ರೈಲ್ವೇ ಉದ್ಯೋಗಿ ಎಚ್ ಸತೀಶ್ ಕುಮಾರ್ ಅವರು ಮುಂಬರುವ ಗೂಡ್ಸ್ ರೈಲಿಗೆ ಸಿಗ್ನಲ್ ಕೊಡಲು ಪ್ಲಾಟ್ಫಾರ್ಮ್ ಕಡೆಗೆ ಹೋಗುತ್ತಿರುವುದನ್ನು ಕಾಣಬಹುದು. ಇದ್ದಕ್ಕಿದ್ದಂತೆ ಹಿಂತಿರುಗಿ ನೋಡಿದಾಗ ಯಾರೋ ಟ್ರ್ಯಾಕ್ ಮೇಲೆ ಬಿದ್ದಿದ್ದಾರೆಂದು ಅರಿವಾಗುತ್ತದೆ. ತಕ್ಷಣವೇ ಸತೀಶ್ ಪ್ಲಾಟ್ಫಾರ್ಮ್ ಕಡೆಗೆ ಓಡಿ ಟ್ರ್ಯಾಕ್ ಮೇಲೆ ಬಿದ್ದಿದ್ದ ವ್ಯಕ್ತಿಯನ್ನು ಹಳಿಯಿಂದ ಹೊರಗೆ ಕರೆದೊಯ್ದಿದ್ದಾರೆ.
ಇನ್ನು ಸತೀಶ್ ಕುಮಾರ್ ಅವರು ಕೆಲವು ಸೆಕೆಂಡುಗಳು ತಡ ಮಾಡಿದ್ದರೂ ವ್ಯಕ್ತಿಯ ಪ್ರಾಣ ಉಳಿಯುತ್ತಿರಲಿಲ್ಲ. ಸತೀಶ್ ಅವರ ಧೈರ್ಯವನ್ನು ಶ್ಲಾಘಿಸುತ್ತದೆ ಎಂದು ರೈಲ್ವೆ ಸಚಿವಾಲಯ ಹೇಳಿದೆ.