ಬೇತುಲ್, ಜೂ 24 (DaijiworldNews/MS): ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ಮದುವೆ ಮೆರವಣಿಗೆಯಲ್ಲಿ ಬುಲ್ಡೋಜರ್ ಬಳಸಿದ್ದಕ್ಕೆ ಚಾಲಕನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ₹ 5,000 ದಂಡ ವಿಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಸಿವಿಲ್ ಇಂಜಿನಿಯರ್ ಅಂಕುಶ್ ಜೈಸ್ವಾಲ್ ಅವರು ಬುಧವಾರ ಜಿಲ್ಲೆಯ ಭೈನಸ್ದೇಹಿ ತಹಸಿಲ್ನ ಜಲ್ಲಾರ್ ಗ್ರಾಮದಲ್ಲಿ ತಮ್ಮ ಮದುವೆ ಮೆರವಣಿಗೆಗೆ ಕುದುರೆ ಅಥವಾ ಕಾರಿನ ಬದಲು ಜೆಸಿಬಿ ಯಂತ್ರದ ಮೇಲೆ ಕುಳಿತುಕೊಂಡು ಮೆರವಣಿಗೆಯಲ್ಲಿ ಸಾಗಿದ್ದರು. ಈ ಘಟನೆಯ ಕೆಲವು ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ವೈರಲ್ ವೀಡಿಯೊಗಳನ್ನು ಗಮನದಲ್ಲಿಟ್ಟುಕೊಂಡು, ಬೆತುಲ್ ಪೊಲೀಸ್ ವರಿಷ್ಠಾಧಿಕಾರಿ ಸಿಮಲಾ ಪ್ರಸಾದ್ ಅವರು ಜೆಸಿಬಿ ಚಾಲಕ ರವಿ ಬರಸ್ಕರ್ ವಿರುದ್ಧ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹೀಗಾಗಿ ಸಂಚಾರಿ ಪೊಲೀಸರು ಮೋಟಾರು ವಾಹನ ಕಾಯ್ದೆ ಉಲ್ಲಂಘನೆಗಾಗಿ ₹ 5,000 ದಂಡ ವಿಧಿಸಿದ್ದಾರೆ . ಜೆಸಿಬಿ ಯಂತ್ರಗಳು ವಾಣಿಜ್ಯ ಬಳಕೆಗೆ ಉದ್ದೇಶಿಸಲಾಗಿದೆ ಮತ್ತು ಜನರನ್ನು ಸಾಗಿಸಲು ಬಳಸಲಾಗುವುದಿಲ್ಲ. ಆದ್ದರಿಂದ, ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 39/192 (1) ಅನ್ನು ಉಲ್ಲಂಘಿಸಿದ್ದಕ್ಕಾಗಿ ಚಾಲಕನಿಗೆ ದಂಡ ವಿಧಿಸಲಾಗಿದೆ ಎಂದು ಅಜಲ್ಲಾರ್ ಪೊಲೀಸ್ ಠಾಣೆ ಪ್ರಭಾರಿ ದೀಪಕ್ ಪರಾಶರ್ ತಿಳಿಸಿದ್ದಾರೆ