ನವದೆಹಲಿ, ಜೂ 24 (DaijiworldNews/DB): ರಾಷ್ಟ್ರಪತಿ ಚುನಾವಣೆಗೆ ಇಂದು ನಾಮ ಪತ್ರ ಸಲ್ಲಿಸಿರುವ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರೊಂದಿಗೆ ಮಾತನಾಡಿ ಬೆಂಬಲ ಕೋರಿದ್ದಾರೆ.
ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಎನ್ಡಿಎಯಿಂದ ದ್ರೌಪದಿ ಮುರ್ಮು ಹಾಗೂ ಮಿತ್ರ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಸ್ಪರ್ಧಿಸಲಿದ್ದಾರೆ. ಎನ್ಡಿಎ ಅಭ್ಯರ್ಥಿ ಮುರ್ಮು ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಚುನಾವಣಾಧಿಕಾರಿ ಪಿ. ಸಿ. ಮೋದಿ ಅವರಿಗೆ ಇಂದು ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿದ ಬಳಿಕ ಸೋನಿಯಾ, ಮಮತಾ ಮತ್ತು ಶರದ್ ಪವರ್ ಅವರೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ಮುರ್ಮು ಮೂವರೂ ನಾಯಕರಲ್ಲಿ ತಮಗೆ ಬೆಂಬಲ ನೀಡುವಂತೆ ಕೋರಿದರು. ನಿಮ್ಮ ಪಕ್ಷಗಳಿಂದ ರಾಷ್ಟ್ರಪತಿ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಬೇಕು ಎಂದು ಮುರ್ಮು ಮನವಿ ಮಾಡಿಕೊಂಡರು.