ರಾಮನಗರ, ಜೂ 24 (DaijiworldNews/DB): ದೇಶದಲ್ಲಿ ಬಿಜೆಪಿ ಹೊರತುಪಡಿಸಿ ಬೇರೆ ಯಾವುದೇ ಪಕ್ಷ ಅಧಿಕಾರದಲ್ಲಿರಬಾರದು ಎಂಬುದೇ ಬಿಜೆಪಿಗರ ಉದ್ದೇಶವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ರಾಜಕೀಯ ಅತಂತ್ರ ಸ್ಥಿತಿ ನಿರ್ಮಾಣವಾಗಲು ಬಿಜೆಪಿಯೇ ಕಾರಣ. ಅಲ್ಲಿನ ಸರ್ಕಾರ ಉರುಳಿಸಿ ಸರ್ಕಾರ ರಚನೆಗೆ ಬಿಜೆಪಿ ಭಾರೀ ಕಸರತ್ತು ನಡೆಸುತ್ತಿದೆ. ಆದರೆ ಬಾಹ್ಯವಾಗಿ ತಮಗೇನೂ ಗೊತ್ತಿಲ್ಲ ಎಂದು ಆ ಪಕ್ಷದವರು ಹೇಳಿಕೊಳ್ಳುತ್ತಿದ್ದಾರೆ. ಆದರೆ ಈ ವಿಚಾರ ಇಡೀ ದೇಶಕ್ಕೇ ಗೊತ್ತಿದೆ. ಮಹಾ ಶಾಸಕರನ್ನು ಹೈಜಾಕ್ ಮಾಡಿ ಬಿಜೆಪಿ ಸರ್ಕಾರವಿರುವ ರಾಜ್ಯದ ರೆಸಾರ್ಟ್ನಲ್ಲಿ ಕೂಡಿಡಲಾಗಿದೆ ಎಂದವರು ಆಪಾದಿಸಿದರು.
ದೇಶದಲ್ಲಿ ಬಿಜೆಪಿ ಬಿಟ್ಟು ಇನ್ನೊಂದು ಪಕ್ಷ ಆಡಳಿತದಲ್ಲಿರಬಾರದು ಎಂಬುದು ಆ ಪಕ್ಷದ ಉದ್ದೇಶವಾಗಿದೆ. ಕರ್ನಾಟಕದಲ್ಲಿಯೂ ಇದೇ ರೀತಿಯ ತಂತ್ರ ಹೆಣೆದು ಅಧಿಕಾರಕ್ಕೆ ಬಂದಿದ್ದರು ಎಂದವರು ಆಕ್ರೋಶ ವ್ಯಕ್ತಪಡಿಸಿದರು.