ಬೆಂಗಳೂರು, ಜೂ 24 (DaijiworldNews/DB): ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡುವ ಯಾವುದೇ ಯೋಚನೆ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡುವ ಕುರಿತಂತೆ ಸಚಿವ ಉಮೇಶ್ ಕತ್ತಿ ಹೇಳಿಕೆ ಕುರಿತಂತೆ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಉಮೇಶ್ ಕತ್ತಿ ಅವರು ಈ ರೀತಿ ಮಾತನಾಡುತ್ತಿರುವುದು ಇದೇ ಮೊದಲಲ್ಲ. ಹಲವಾರು ವರ್ಷಗಳಿಂದ ಅವರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕುರಿತು ಹೇಳಿಕೆ ನೀಡುತ್ತಲೇ ಇದ್ದಾರೆ. ಅವರ ಹೇಳಿಕೆಗೆ ಅವರೇ ಉತ್ತರಿಸಬೇಕು. ಆದರೆ ಸರ್ಕಾರದ ಮಟ್ಟದಲ್ಲಿ ಅಂತಹ ಯಾವುದೇ ಯೋಜನೆ, ಯೋಚನೆ ಇಲ್ಲ ಎಂದರು.
ರಾಜ್ಯ ವಿಭಜನೆ ಮತ್ತು ಪ್ರತ್ಯೇಕ ರಾಜ್ಯ ರಚನೆ ಕುರಿತು ಅವರು ಆಗಾಗ ಒತ್ತಾಯಿಸುತ್ತಲೇ ಬಂದಿದ್ದಾರೆ. ದಕ್ಷಿಣ ಕರ್ನಾಟಕದವರಿಗೆ ಕೇಂದ್ರೀಕೃತ ಸ್ಥಾನವಾಗಿರುವ ಬೆಂಗಳೂರಿನಲ್ಲಿ ಉತ್ತರ ಕರ್ನಾಟಕ ಭಾಗದವರು ತೊಂದರೆ ಅನುಭವಿಸುತ್ತಿರುವ ಕಾರಣ ಪ್ರತ್ಯೇಕ ರಾಜ್ಯ ಬೇಕು ಎಂದು ಕೇಳುತ್ತಿದ್ದಾರೆ. ಅವರ ಅಜೆಂಡಾವೂ ಅದೇ ಎಂದಿದ್ದಾರೆ ಎಂದು ಸಿಎಂ ಬೊಮ್ಮಾಯಿ ಆಪಾದಿಸಿದರು.