ನವದೆಹಲಿ, ಜೂ 24 (DaijiworldNews/DB): ನನಗೆ ತುಂಬಾ ಸುಸ್ತಾಗಿದೆ ಎಂದ ರಾಹುಲ್ ಗಾಂಧಿಯವರು ಜಾರಿ ನಿರ್ದೇಶನಾಲಯ ಅಧಿಕಾರಿಗಳ ಶೇ. 20ರಷ್ಟು ಪ್ರಶ್ನೆಗಳಿಗೆ ಉತ್ತರಿಸಲೇ ಇಲ್ಲ! ಹೀಗೆಂದು ಇಡಿ ಮೂಲಗಳು ಬಹಿರಂಗಪಡಿಸಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಸತತ ಐದು ದಿನಗಳ ಕಾಲ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸುದೀರ್ಘ ವಿಚಾರಣೆಗೊಳಪಡಿಸಿತ್ತು. ನಿರಂತರ ವಿಚಾರಣೆ ಎದುರಿಸಿದ್ದ ರಾಹುಲ್ ಗಾಂಧಿಯವರು ಇಡಿ ಅಧಿಕಾರಿಗಳ ಶೇ. 20ರಷ್ಟುಪ್ರಶ್ನೆಗಳಿಗೆ ಉತ್ತರಿಸಲೇ ಇಲ್ಲ ಎಂಬ ಅಂಶವನ್ನು ಇಡಿ ಮೂಲಗಳು ಬಹಿರಂಗಪಡಿಸಿರುವ ಬಗ್ಗೆ ವರದಿಯಾಗಿದೆ. ನನಗೆ ತುಂಬಾ ಸುಸಸ್ತಾಗಿದೆ. ಇನ್ನು ಉತ್ತರಿಸುವುದು ನನ್ನಿಂದ ಸಾಧ್ಯವಿಲ್ಲ ಎಂಬುದಾಗಿ ರಾಹುಲ್ ಗಾಂಧಿಯವರು ಇಡಿ ಅಧಿಕಾರಿಗಳ ಮುಂದೆ ಹೇಳಿಕೊಂಡಿದ್ದರು ಎನ್ನಲಾಗಿದೆ.
ರಾಹುಲ್ ಹೇಳೋದೇ ಬೇರೆ
ಅತ್ತ ಇಡಿ ಮೂಲಗಳು ರಾಹುಲ್ ಅವರಿಗೆ ಸುಸ್ತಾದ ಕಾರಣ ಇಡಿಯ ಕೆಲವು ಪ್ರಶ್ನೆಗಳಿಗೆ ರಾಹುಲ್ ಉತ್ತರಿಸಲಿಲ್ಲ ಎಂದಿದ್ದರೆ ಇತ್ತ ರಾಹುಲ್ ಅವರು ಅಧಿಕಾರಿಗಳ ಪ್ರಶ್ನೆಗಳಿಗೆ ನಾನು ತಾಳ್ಮೆಯಿಂದ ಉತ್ತರಿಸುವುದನ್ನು ಕಂಡು ಸ್ವತಃ ಇಡಿ ಅಧಿಕಾರಿಗಳೇ ಬೆರಗಾಗಿದ್ದರು ಎಂದಿದ್ದಾರೆ.
ಇಡಿ ವಿಚಾರಣೆ ಮುಗಿದ ಬಳಿಕ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸಂಸದರು ಮತ್ತು ಶಾಸಕರನ್ನುದ್ದೇಶಿಸಿ ಮಾತನಾಡುವ ವೇಳೆ, ನಾನು ಅತ್ಯಂತ ತಾಳ್ಮೆಯಿಂದ ಅವರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೆ. ಇದರಿಂದ ಅಧಿಕಾರಿಗಳು ಆಶ್ಚರ್ಯಗೊಂಡಿದ್ದರು. ಸುದೀರ್ಘ ವಿಚಾರಣೆಗೊಳಪಟ್ಟರೂ ನಿಮಗೆ ಸುಸ್ತಾಗಲಿಲ್ಲವೇ ಎಂದು ಕೇಳಿದ್ದರು. ಅಲ್ಲದೆ ನನ್ನ ತಾಳ್ಮೆ ಮತ್ತು ಸಾಮರ್ಥ್ಯಕ್ಕೆ ಮೆಚ್ಚಿದ್ದರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.