ಕೋಲ್ಕತ್ತಾ, ಜೂ 24 (DaijiworldNews/MS) ಮಹಾರಾಷ್ಟ್ರದಲ್ಲಿ ಆಪರೇಶನ್ ಕಮಲ ವಿಚಾರಕ್ಕೆ ಸಂಬಂಧಿಸಿದಂತೆ ಲೇವಡಿ ಮಾಡಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ’ಬಂಡಾಯ ಶಾಸಕರನ್ನು ಬಂಗಾಳಕ್ಕೆ ಕಳುಹಿಸುವಂತೆ ’ ಬಿಜೆಪಿಗೆ ಪಕ್ಷಕ್ಕೆ ಕೋರಿದ್ದಾರೆ.
ಅಸ್ಸಾಂ ಸರ್ಕಾರವು ಅಲ್ಲಿನ ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ನೀವೇಕೆ ತೊಂದರೆ ಮಾಡುತ್ತಿದ್ದೀರಿ? ಬಿಜೆಪಿಗರೇ ನೀವು ಶಾಸಕರನ್ನುಬಂಗಾಳಕ್ಕೆ ಕಳುಹಿಸಿ ಮತ್ತು ನಾವು ಉತ್ತಮ ಆತಿಥ್ಯವನ್ನು ನೀಡುತ್ತೇವೆ ಜೊತೆಗೆ ಪ್ರಜಾಪ್ರಭುತ್ವವನ್ನು ಸಹ ನೋಡಿಕೊಳ್ಳುತ್ತೇವೆ" ಎಂದು ಮಾತಿನಲ್ಲೇ ಮಮತಾ ಕುಟುಕಿದ್ದಾರೆ.
ರಾಷ್ಟ್ರಪತಿ ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ಮಹಾರಾಷ್ಟ್ರ ಸರ್ಕಾರವನ್ನು ಅಸ್ತವ್ಯಸ್ತಗೊಳಿಸಲು ಬಿಜೆಪಿ ಉದ್ದೇಶಪೂರ್ವಕವಾಗಿ ತಂತ್ರ ಹೆಣೆದಿದೆ.ಮಹಾರಾಷ್ಟ್ಸ್ರದ ಸರ್ಕಾರವನ್ನು "ಅನೈತಿಕ ಮತ್ತು ಅಸಂವಿಧಾನಿಕ" ರೀತಿಯಲ್ಲಿ ಕೆಳಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಮ್ಮಿಶ್ರ ರಚನೆಯನ್ನು ಸಂಪೂರ್ಣವಾಗಿ ಕೆಡವಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಕಿಡಿಕಾರಿದ್ದಾರೆ.
ಮಹಾರಾಷ್ಟ್ರದ ಪರಿಸ್ಥಿತಿಯನ್ನು ’ಆಘಾತಕಾರಿ’ ಎಂದು ವಿವರಿಸಿದ ಮಮತಾ , " ನಾವು ಜನರಿಗೆ, ಚುನಾವಣಾ ಜನಾದೇಶಕ್ಕಾಗಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ನ್ಯಾಯವನ್ನು ಒದಗಿಸಲು ಬಯಸುತ್ತೇವೆ" ಎಂದು ಹೇಳಿದ್ದಾರೆ.