ಬೆಂಗಳೂರು, ಜೂ 24 (DaijiworldNews/MS): ಬಿಜೆಪಿ ಅಧಿಕಾರ ದಾಹಕ್ಕೆ ಇನ್ಮುಂದೆ ಸ್ಪಷ್ಟ ಬಹುಮತ ಬಂದ ಸರ್ಕಾರ ಉಳಿಯುವುದು ಅನುಮಾನ ಎಂದು ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ಕಮಲ ಪಕ್ಷದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, "ಭಾರತೀಯ ಜನತಾ ಪಕ್ಷದ ಅಧಿಕಾರ ದಾಹ ಮಿತಿ ಮೀರಿದೆ. ಬೇರೆ ಪಕ್ಷ ಅಧಿಕಾರದಲ್ಲಿ ಇರುವುದನ್ನು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ಇವರ ಅಧಿಕಾರ ದಾಹಕ್ಕೆ ಮುಂದಿನ ದಿನಗಳಲ್ಲಿ ಸ್ಪಷ್ಟ ಬಹುಮತ ಬಂದ ಸರಕಾರವೂ ಉಳಿಯುವುದು ಅನುಮಾನ. ಬಹುಮತ ಪಡೆದ ಇತರೆ ಯಾವುದೇ ಪಕ್ಷದ ಸರಕಾರಗಳು ಅವಧಿ ಮುಗಿಸುವುದಕ್ಕೂ ಬಿಡುವುದಿಲ್ಲ ಅನ್ನಿಸುತ್ತದೆ" ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
"ಮಹಾರಾಷ್ಟ್ರದ ಬಿಜೆಪಿ ನಡವಳಿಕೆ ಸಂವಿಧಾನಕ್ಕೆ ಮಾಡುತ್ತಿರುವ ಅವಮಾನವಾಗಿದೆ. ಮೇಲ್ನೋಟಕ್ಕೆ ಉದ್ದವ್ ಠಾಕ್ರೆ ಅವರು ಶಾಸಕರ ವಿಶ್ವಾಸ ಗಳಿಸಿಲ್ಲವೆಂದು ಹೇಳುತ್ತಿದ್ದಾರೆ. ಆದರೆ ಅದರ ಹಿಂದೆ ಇರುವುದು ಬಿಜೆಪಿಯೇ. ಇದರಲ್ಲಿ ಯಾವುದೇ ಅನುಮಾನ ಇಲ್ಲ್. ಯಾಕೆಂದರೆ ಇದೇ ಅನುಭವ ನನಗೂ ಆಗಿದೆ. ಕಾಂಗ್ರೆಸ್ ಶಾಸಕರ ಕ್ಷೇತ್ರದ ಅಭಿವೃದ್ದಿಗೆ 19 ಸಾವಿರ ಕೋಟಿ ನೀಡಿದರೂ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲವೆಂದು ನನ್ನ ಮೇಲೂ ಸುಳ್ಳು ಆರೋಪ ಮಾಡಿ ಆಪರೇಶನ್ ಕಮಲ ಮಾಡಿ ಸರಕಾರವನ್ನೇ ಉರುಳಿಸಿದರು" ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸಂವಿಧಾನಕ್ಕೆ ಅವಮಾನ ಮಾಡುತ್ತಾ ಬಿಜೆಪಿ ದೇಶವ್ಯಾಪಿ ಅಧಿಕಾರ ವಿಸ್ತಾರ ಮಾಡುತ್ತಿದೆ. ಸಂವಿಧಾನ ರಕ್ಷಣೆ ಅನ್ನುವುದೇ ಇಲ್ಲವಾಗಿದೆ. ಎಷ್ಟೇ ಒಳ್ಳೆಯ ಸರಕಾರ ಮಾಡಿದರೂ ಬೆಲೆ ಇಲ್ಲದಂತೆ ಆಗಿದ್ದು ಆಪರೇಶನ್ ಕಮಲ ಮಾಡಿ ಸರ್ಕಾರ ಕೆಡವಲಾಗುತ್ತಿದೆ ಎಂದು ಕಿಡಿಕಾರಿದರು.