ನವದೆಹಲಿ, ಜೂ 23 (DaijiworldNews/DB): ಮಹಾರಾಷ್ಟ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಬಿಜೆಪಿ ನಡೆಸುತ್ತಿದೆ ಎಂದು ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದಾಗ ಇಲ್ಲಿ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಮಧ್ಯಪ್ರದೇಶ, ಕರ್ನಾಟಕ, ಗೋವಾದಲ್ಲಿಯೂ ಇದೇ ರೀತಿ ಈ ಹಿಂದೆ ಬಿಜೆಪಿ ಮಾಡಿತ್ತು. ಇದೀಗ ಮಹಾರಾಷ್ಟ್ರ ಸರ್ಕಾರದ ಮೇಲೂ ಅದರ ಕಣ್ಣು ಬಿದ್ದಿದೆ ಎಂದರು.
ಮಹಾ ವಿಕಾಸ್ ಆಘಾದಿಯೊಂದಿಗೆ ಕಾಂಗ್ರೆಸ್ ನಿಲ್ಲಲಿದೆ. ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡಲು ಬಯಸುತ್ತೇವೆ. ಅಲ್ಲಿನ ಸರ್ಕಾರ ಜನಪರವಾಗಿಯೇ ಕೆಲಸ ಮಾಡುತ್ತಿದೆ ಎಂದವರು ತಿಳಿಸಿದರು.