ಸೋನಭದ್ರಾ, ಜೂ 23 (DaijiworldNews/DB): ವಿವಾಹ ಮಹೋತ್ಸವದ ಮೆರವಣಿಗೆಯಲ್ಲಿ ಸಂಭ್ರಮದಲ್ಲಿ ವರ ಹಾರಿಸಿದ ಗುಂಡು ಆತನ ಸ್ನೇಹಿತನಿಗೆ ತಗುಲಿ ಸ್ನೇಹಿತ ಪ್ರಾಣ ಕಳೆದುಕೊಂಡ ಆಘಾತಕಾರಿ ಘಟನೆ ಉತ್ತರಪ್ರದೇಶದ ಸೋನಭದ್ರಾದಲ್ಲಿ ನಡೆದಿದೆ. ಈ ದೃಶ್ಯ ವೀಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಎದೆ ಝಲ್ಲೆನ್ನಿಸುವಂತಿದೆ.
ಸೋನಭದ್ರಾ ಜಿಲ್ಲೆಯ ಬ್ರಹ್ಮನಗರ ಪ್ರದೇಶದಲ್ಲಿ ಘಟನೆ ನಡೆದಿದ್ದು, ವರನ ಸ್ನೇಹಿತ ಬಾಬು ಲಾಲ್ ಯಾದವ್ ಮೃತಪಟ್ಟಿದ್ದಾರೆ. ವರ ಮನೀಶ್ ಮಾಧೇಶಿಯಾ ತನ್ನ ಮದುವೆಯ ಮೆರವಣಿಗೆ ಸಂದರ್ಭದಲ್ಲಿ ಸಂಭ್ರಮಕ್ಕಾಗಿ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ. ಈ ವೇಳೆ ಗುಂಡು ಸೈನಿಕನಾಗಿರುವ ಬಾಬು ಲಾಲ್ ಯಾದವ್ಗೆ ತಗುಲಿದೆ. ತತ್ಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ವರ ಬಳಕೆ ಮಾಡಿದ ಪಿಸ್ತೂಲ್ ಮೃತ ಯಾದವ್ಗೆ ಸೇರಿದ್ದಾಗಿತ್ತು ಎಂದು ಸೋನಭದ್ರಾ ಪೊಲೀಸ್ ವರಿಷ್ಠಾಧಿಕಾರಿ ಅಮರೇಂದ್ರ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.
ಭಾರತದಲ್ಲಿ ಸಂಭ್ರಮ, ಉತ್ಸವ ಮುಂತಾದವುಗಳಲ್ಲಿ ಪರವಾನಿಗೆ ಹೊಂದಿದ ಗನ್ಗಳನ್ನು ಬಳಸುವುದು ಕೂಡಾ ಅಪರಾಧವಾಗಿದೆ.