ಮುಂಬೈ, ಜೂ 23 (DaijiworldNews/DB): ಅತೃಪ್ತ ಶಾಸಕರ ಪೈಕಿ 20ಕ್ಕೂ ಅಧಿಕ ಮಂದಿ ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೊಸ ಬಾಂಬ್ ಸಿಡಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರ ಪರಮಾಪ್ತರೂ ಆಗಿರುವ ಸಂಜಯ್ ರಾವತ್ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿ, ನನ್ನೊಂದಿಗೆ ಸಂಪರ್ಕದಲ್ಲಿರುವ ಶಾಸಕರೆಲ್ಲರೂ ಪಕ್ಷಕ್ಕೆ ಯಾವುದೇ ಹಾನಿಯಾಗದಂತೆ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಆದರೆ ಸದ್ಯ ಅವರೆಲ್ಲರೂ ಒತ್ತಡದಲ್ಲಿದ್ದಾರೆ ಎಂದರು.
ಏಕನಾಥ್ ಶಿಂಧೆ ಅವರ ನೇತೃತ್ವದಲ್ಲಿ ಗೌಹಾತಿಯಲ್ಲಿ ರಹಸ್ಯವಾಗಿರುವ 30ಕ್ಕೂ ಅಧಿಕ ಶಾಸಕರ ನಿಲುವಿನಿಂದಾಗಿ ಉದ್ದವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ತೀವ್ರ ಸಂಕಷ್ಟ ಎದುರಾಗಿದೆ. ಹೀಗಾಗಿ ಪಕ್ಷ ಮತ್ತು ಸರ್ಕಾರವನ್ನು ಉಳಿಸಿಕೊಳ್ಳುವ ಹಿನ್ನೆಲೆಯಲ್ಲಿ ಏಕನಾಥ್ ಶಿಂಧೆ ಅವರಿಗೇ ಶಾಸಕಾಂಗ ಪಕ್ಷದ ನಾಯಕ ಸ್ಥಾನ ನೀಡುವ ಮತ್ತು ಅವರು ಬಯಸಿದರೆ ಅವರನ್ನೇ ಮಹಾರಾಷ್ಟ್ರ ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿಯೂ ಸಿಎಂ ಉದ್ದವ್ ಠಾಕ್ರೆ ಹೇಳಿದ್ದಾರೆ. ಈ ನಡುವೆ ಸಂಜಯ್ ರಾವತ್ ಅವರ ಹೇಳಿಕೆ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.