ಬೆಂಗಳೂರು, ಜೂ 23 (DaijiworldNews/MS): ವಾಟ್ಸ್ಅಪ್ನಲ್ಲಿ ಬಂದಿರುವುದನ್ನು ಪೋಸ್ಟ್ ಮಾಡುವ ಮುನ್ನ ಬಿಜೆಪಿಯವರೇ ಇತಿಹಾಸ ಓದಿಕೊಳ್ಳಿ ಕಾಂಗ್ರೆಸ್ ನಾಯಕ ದಿನೇಶ್ ಗುಂಡುರಾವ್ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಷ್ಟ್ರಪತಿ ಚುನಾವಣೆಗೆ ಎನ್ಡಿಎ ಅಭ್ಯರ್ಥಿಯನ್ನಾಗಿ ದ್ರೌಪದಿ ಮುರ್ಮುಗೆ ಅವರನ್ನು ಆಯ್ಕೆ ಮಾಡಿರುವ ಕುರಿತು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾಡಿದ್ದ ಟ್ವೀಟ್ಗೆ ದಿನೇಶ್ ಗುಂಡುರಾವ್ ತಿರುಗೇಟು ಕೊಟ್ಟಿದ್ದಾರೆ.
'ಮುಸ್ಲಿಂ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದ್ದು ನಾವೇ. ದಲಿತ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದ್ದೂ ನಾವೇ. ಇಂದು ಆದಿವಾಸಿ ಬುಡಕಟ್ಟು ಜನಾಂಗದ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಮಾಡುವುದು ನಾವೇ... ಏಕೆಂದರೆ ನಾವು ಜಾತಿವಾದಿಗಳಲ್ಲಾ - ರಾಷ್ಟ್ರವಾದಿಗಳು. (ವಾಟ್ಸ್ಆಯಪ್ನಲ್ಲಿ ಬಂದಿದ್ದು)' ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಬುಧವಾರ ಟ್ವೀಟ್ ಮಾಡಿದ್ದರು.
ಈ ಟ್ವೀಟ್ಗೆ ಪ್ರತಿಕ್ರಿಯಿಸಿರುವ ದಿನೇಶ್ ಗುಂಡುರಾವ್, ವಾಟ್ಸ್ಅಪ್ ಯೂನಿವರ್ಸಿಟಿಯ ವಿಧೇಯ ವಿದ್ಯಾರ್ಥಿಗಳಾದ ಬಿಜೆಪಿಯವರ ಜ್ಞಾನದ ಮಟ್ಟವಿದು. ಕೋಟಾ ಶ್ರೀನಿವಾಸ್ ಪೂಜಾರಿ ಸಚಿವರಾಗಿದ್ದುಕೊಂಡು ವಾಟ್ಸ್ಅಪ್ನಲ್ಲಿ ಬಂದಿದನ್ನು ಯಥಾವತ್ತಾಗಿ ಪೋಸ್ಟ್ ಮಾಡುತ್ತಾರೆಂದರೆ ಅವರ ಬುದ್ದಿಗೆ ಎಷ್ಟು ಮಂಕು ಕವಿದಿರಬಹುದು? ಪೂಜಾರಿಯವರೆ ವಾಟ್ಸ್ಅಪ್ನಲ್ಲಿ ಬಂದಿರುವುದನ್ನು ಪೋಸ್ಟ್ ಮಾಡುವ ಮುನ್ನ ಇತಿಹಾಸ ಓದಿಕೊಳ್ಳಿ.
ರಾಷ್ಟ್ರದ ಮೊದಲ ಮುಸ್ಲಿಂ ರಾಷ್ಟ್ರಪತಿ , ಸಿಖ್ , ದಲಿತ ಅಷ್ಟೆ ಏಕೆ, ಮೊದಲ ಮಹಿಳಾ ರಾಷ್ಟ್ರಪತಿಯ ಕೊಡುಗೆಯೂ ಕಾಂಗ್ರೆಸ್ನದ್ದೆ! ಆದರೆ ಕಾಂಗ್ರೆಸ್ ಯಾವತ್ತೂ ಇದನ್ನು ಪ್ರಚಾರಕ್ಕೆ ಬಳಸಲಿಲ್ಲ. ಇದೇ ವ್ಯತ್ಯಾಸ ಎಂದು ಹೇಳಿದ್ದಾರೆ.
ಕೋಟಾರವರೆ, BJPಯವರು ಜಾತಿವಾದಿಗಳಲ್ಲ ರಾಷ್ಟ್ರವಾದಿಗಳೆಂದು ವ್ಯಾಖ್ಯಾನಿಸಿದ್ದೀರಿ.ಆ ನಿಮ್ಮ ವ್ಯಾಖ್ಯಾನ ಖಂಡಿತ ತಪ್ಪು.ನೀವು ರಾಷ್ಟ್ರೀಯವಾದಿಗಳಲ್ಲ,ರಾಷ್ಟ್ರವ್ಯಾಧಿಗಳು ಜಾತ್ಯಾತೀತತೆಯ ಮುಖವಾಡ ಹಾಕಿಕೊಂಡಿರುವ ಕಟ್ಟರ್ ವಾದಿಗಳು. ದೇಶ ಒಡೆಯುವ ಕೋಮುವಾದಿಗಳು ಮತ್ತು ಅಂತರಂಗದಲ್ಲಿ ಪಸರಿಸುವ ಮನುವಾದಿಗಳು ಎಂದು ತಿರುಗೇಟು ನೀಡಿದ್ದಾರೆ.
ಇದೇ ಟ್ವೀಟ್ ಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, 'ಚಿಂತನೆಗಳಿಲ್ಲದ ಬಿಜೆಪಿಯವರಿಗೆ ವಾಟ್ಸ್ಆಯಪ್ ಯೂನಿವರ್ಸಿಟಿಯ ಸುಳ್ಳುಗಳೇ ಮೂಲ. ಅಂದಹಾಗೆ, ಎಸ್ಇ/ ಎಸ್ಟಿ ಜನಾಂಗದ 7000 ರು. ಕೋಟಿ, ದಲಿತರ ಪಾಲಿನ ಬೋರ್ವೆಲ್ ಹೆಸರಲ್ಲಿ 431 ರು. ಕೋಟಿ, ಭೋವಿ ನಿಗಮದಲ್ಲಿ 150 ಕೋಟಿ ರು. ಲೂಟಿ ಮಾಡುವುದು ನಿಮ್ಮ ರಾಷ್ಟ್ರವಾದವೇ' ಎಂದು ಪ್ರಶ್ನಿಸಿದ್ದಾರೆ.