ಬೆಂಗಳೂರು, ಜೂ 23 (DaijiworldNews/MS): ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ರಬ್ಬರ್ ಸ್ಟ್ಯಾಂಪ್ ಎಂದು ಕರೆದಿರುವ ಕಾಂಗ್ರೆಸ್ ವಿರುದ್ದ ಕಿಡಿಕಾರಿರುವ ಬಿಜೆಪಿಯೂ, "ಒಬ್ಬ ಬುಡಕಟ್ಟು ಸಮುದಾಯದ ಮಹಿಳೆ ರಾಷ್ಟ್ರದ ಅತ್ಯುನ್ನತ ಸ್ಥಾನಕ್ಕೆ ಏರುವುದನ್ನು ನಿಮಗೇಕೆ ಸಹಿಸಲಾಗುತ್ತಿಲ್ಲ" ಎಂದು ತಿರುಗೇಟು ನೀಡಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯ ಘಟಕ, "ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರನ್ನು ಕಣಕ್ಕಿಳಿಸಿರುವುದನ್ನೇ ಟೀಕಿಸುತ್ತಿರುವ ಕಾಂಗ್ರೆಸ್ ಹಾಗೂ ಅದರ ಅಂಗಪಕ್ಷಗಳು ಬಯಲಿನಲ್ಲಿ ಬಚ್ಚಿಟ್ಟುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ.ಒಬ್ಬ ಬುಡಕಟ್ಟು ಸಮುದಾಯದ ಮಹಿಳೆ ರಾಷ್ಟ್ರದ ಅತ್ಯುನ್ನತ ಸ್ಥಾನಕ್ಕೆ ಏರುವುದನ್ನು ನಿಮಗೇಕೆ ಸಹಿಸಲಾಗುತ್ತಿಲ್ಲ ಎಂದು ಪ್ರಶ್ನಿಸಿದೆ.
ದೇಶದ ಅತ್ಯುನ್ನತ ಪದವಿಗೆ ಏರುತ್ತಿರುವ ಮೊದಲ ಬುಡಕಟ್ಟು ಮಹಿಳೆಯಾಗಿ ದ್ರೌಪದಿ ಮುರ್ಮು ಅವರು ಗುರುತಿಸಿಕೊಳ್ಳಲಿದ್ದಾರೆ.ಬಿಜೆಪಿ ವಿರುದ್ಧ ಯೋಜಿತ ಪ್ರಚಾರ ನಡೆಸುತ್ತಿದ್ದ ಕಾಂಗ್ರೆಸ್ ಹಾಗೂ ಎಡಪಂಥೀಯ ಬುದ್ಧಿಜೀವಿಗಳಿಗೆ ಈಗ ಅಸ್ತಿತ್ವದ ಚಿಂತೆ ಮೂಡುತ್ತಿದೆಯೇ ಎಂದು ಕಾಲೆಳೆದಿದೆ.
ಮೆ ಲಡ್ಕಿ ಹೂ, ಲಡ್ ಸಕ್ತಿ ಹೂ ಎಂದು ಮಹಿಳೆಯರ ಪರವಾಗಿ ಹೂಂಕರಿಸಿದ್ದ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಆದ್ಯತೆಯೇ ನೀಡಲಿಲ್ಲ. ಬಿಜೆಪಿ ಮಹಿಳಾ ಸಬಲೀಕರಣಕ್ಕೆ ಬದ್ದವಾಗಿದೆ, ಆ ಕಾರಣದಿಂದಲೇ ವನವಾಸಿ ನಾಯಕಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿಸಿದ್ದೇವೆ. ಈ ಬದ್ಧತೆ ವಿಪಕ್ಷಗಳಲ್ಲಿ ಸಾಧ್ಯವೇ? ಎಂದು ಬಿಜೆಪಿ ಕೇಳಿದೆ.
ಅಬ್ದುಲ್ ಕಲಾಂ, ರಾಮನಾಥ್ ಕೊವಿಂದ್ ಹಾಗೂ ದ್ರೌಪದಿ ಮುರ್ಮು ಎಲ್ಲರೂ ಎನ್ಡಿಎ ಆಯ್ಕೆ. ಇಂತಹ ಮಹನೀಯರ ಬಗ್ಗೆ ಯೋಚಿಸಲೂ ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಿಲ್ಲ. ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಆಯ್ಕೆಯನ್ನು ಕಾಂಗ್ರೆಸ್ ರಬ್ಬರ್ ಸ್ಟ್ಯಾಂಪ್ ಎಂದಿರುವುದು ಅಕ್ಷಮ್ಯ.ಕಾಂಗ್ರೆಸ್ ನಕಲಿಗಾಂಧಿಸ್ಟ್ಯಾಂಪ್ ಅಲ್ಲವೇ?ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವಿದ್ದಾಗ ಮೂರು ಬಾರಿ ರಾಷ್ಟ್ರಪತಿ ಚುನಾವಣೆ ನಡೆಸುವ ಅವಕಾಶ ಲಭಿಸಿದೆ.ಅಬ್ದುಲ್ ಕಲಾಂ - ಮುಸ್ಲಿಂ ಸಮುದಾಯ,ರಾಮನಾಥ್ ಕೋವಿಂದ್ - ದಲಿತ ಸಮುದಾಯ, ದ್ರೌಪದಿ ಮುರ್ಮು - ಬುಡಕಟ್ಟು ಮಹಿಳೆ ಈ ಆಯ್ಕೆಗಳು ಕಾಂಗ್ರೆಸ್ ಪಕ್ಷಕ್ಕೆ ಏಕೆ ಕಹಿಯಾಗುತ್ತಿದೆ? ಬಿಜೆಪಿ ರಾಷ್ಟ್ರಪತಿ ಸ್ಥಾನಕ್ಕೆ ಚುನಾಯಿಸುವ ವ್ಯಕ್ತಿಗಳು ರಬ್ಬರ್ ಸ್ಟ್ಯಾಂಪ್ ಎಂದು ಕಾಂಗ್ರೆಸ್ ಒರಟು ವಾದ ಮಾಡುತ್ತಿದೆ.ಕಾಂಗ್ರೆಸ್ ಪಕ್ಷದಲ್ಲಿ ಇರುವ ನಾಯಕರು ನಕಲಿ ಗಾಂಧಿ ಕುಟುಂಬದ ರಬ್ಬರ್ ಸ್ಟ್ಯಾಂಪ್ ಅಲ್ಲದೆ ಮತ್ತೇನು?
ದೇಶದ ಮೇಲೆ ಇಂದಿರಾ ತುರ್ತು ಪರಿಸ್ಥಿತಿ ಹೇರಿದಾಗ ಆಗಿನ ರಾಷ್ಟ್ರಪತಿಗಳು ವರ್ತಿಸಿದ ರೀತಿಯನ್ನು ಒಮ್ಮೆ ನೆನಪಿಸಿಕೊಳ್ಳಿ.ಯಾರು ಯಾರನ್ನು ರಬ್ಬರ್ ಸ್ಟ್ಯಾಂಪ್ ಮಾಡಿಕೊಂಡಿದ್ದರು ಎಂಬುದನ್ನು ಈ ಘಟನೆಯೊಂದರಿಂದಲೇ ತಿಳಿಯಬಹುದು. ಅಂದು ರಾಷ್ಟ್ರಪತಿಯನ್ನು ಹೇಗೆ ನಡೆಸಿಕೊಳ್ಳಲಾಯ್ತು ಎಂಬುದನ್ನು ನೆನಪಿಸಬೇಕೇ ಎಂದು ಬಿಜೆಪಿ ಕಿಡಿಕಾರಿದೆ.