ಲಖನೌ, ಜೂ 23 (DaijiworldNews/DB): ಅಗ್ನಿಪಥ್ ಯೋಜನೆ ವಿರೋಧಿಸಿ ಗಲಭೆ ಎಬ್ಬಿಸಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದವರಿಂದಲೇ ನಷ್ಟ ವಸೂಲಿ ಮಾಡಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ.
ಪ್ರತಿಭಟನೆಯ ಹೆಸರಿನಲ್ಲಿ ರೈಲಿಗೆ ಬೆಂಕಿ ಹಚ್ಚುವುದು, ಕಲ್ಲು ತೂರಾಟ ನಡೆಸುವ ಮೂಲಕ ಕೋಟ್ಯಾಂತರ ರೂ. ನಷ್ಟ ಮಾಡಿದ್ದಾರೆ ಹೀಗಾಗಿ ಹಿಂಸಾಚಾರದಲ್ಲಿ ಭಾಗಿಯಾದವರಿಂದಲೇ ನಷ್ಟ ವಸೂಲಿ ಮಾಡಿಕೊಳ್ಳುವುದಾಗಿ ನಿರ್ಧರಿಸಲಾಗಿದೆ ಎಂದು ಅಡಿಷನಲ್ ಡೈರೆಕ್ಟರ್ ಜನರಲ್ (ಲಾ ಅಂಡ್ ಆರ್ಡರ್ ) ಪ್ರಶಾಂತ್ ಕುಮಾರ್ ಅವರು ತಿಳಿಸಿದ್ದಾರೆ.
ಪ್ರತಿಭಟನಾಕಾರರು 36 ಬಸ್ಗಳಿಗೆ ಹಾನಿ ಮಾಡಿದ್ದು, ಸರ್ಕಾರಕ್ಕೆ ಇದರಿಂದ 12 ಲಕ್ಷ ರೂ,ಗಳಿಗೂ ಹೆಚ್ಚು ನಷ್ಟ ಉಂಟಾಗಿದೆ. ಅಲ್ಲದೆ ವಿವಿಧ ರೀತಿಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟಾಗಿದ್ದು, ಎಲ್ಲಾ ನಷ್ಟವನ್ನು ಹಿಂಸಾಚಾರ ನಡೆಸಿದವರಿಂದಲೇ ಭರಿಸಲಾಗುವುದು. ಈವರೆಗೆ ಹಿಂಸಾಚಾರದಲ್ಲಿ ಭಾಗಿಯಾಗಿದ್ದ 49 ಮಂದಿ ಮೇಲೆ ಎಫ್.ಐ.ಆರ್ ದಾಖಲಾಗಿದೆ. ಅಲ್ಲದೆ ಈವರೆಗೆ ಬಂಧಿತರ ಸಂಖ್ಯೆ 525ಕ್ಕೆ ಏರಿಕೆಯಾಗಿದೆ ಎಂದವರು ತಿಳಿಸಿದ್ದಾರೆ.