ಮುಂಬೈ, ಜೂ 23 (DaijiworldNews/DB): ಮಹಾರಾಷ್ಟ್ರದಲ್ಲಿ ಸಿಎಂ ಉದ್ದವ್ ಠಾಕ್ರೆ ವಿರುದ್ದ ಬಂಡಾಯವೆದ್ದ ನಾಯಕ ಏಕನಾಥ್ ಶಿಂಧೆ ಅವರಿಗೆ ಉದ್ದವ್ ಠಾಕ್ರೆ ಹಾಗೂ ಎನ್ಸಿಪಿ ನಾಯಕ ಶರದ್ ಪವಾರ್ ಅವರು ಮುಖ್ಯಮಂತ್ರಿ ಸ್ಥಾನದ ಆಫರ್ ನೀಡಿದ್ದಾರೆ. ಆದರೆ ಶಿಂಧೆ ಇದನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.
ಏಕನಾಥ ಶಿಂಧೆ ಅವರೊಂದಿಗೆ ಕೆಲವು ಶಾಸಕರು ಕೂಡಾ ಬಂಡಾಯ ಗುಂಪಿನಲ್ಲಿ ಕಾಣಿಸಿಕೊಂಡ ಕಾರಣ ಮಹಾ ಸರ್ಕಾರ ಪಥನವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದ ನಡುವೆ ರಾತ್ರೋರಾತ್ರಿ ಸಿಎಂ ಉದ್ದವ್ ಠಾಕ್ರೆ ಮುಂಬೈನಲ್ಲಿರುವ ತಮ್ಮ ಅಧಿಕೃತ ನಿವಾಸವನ್ನು ಖಾಲಿ ಮಾಡಿ ಬಾಂದ್ರಾದಲ್ಲಿರುವ ಕುಟುಂಬದ ಮಾತೋಶ್ರೀಗೆ ತೆರಳಿದ್ದರು. ಈ ನಡುವೆ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಮುಖ್ಯಸ್ಥ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಮತ್ತು ವಸತಿ ಸಚಿವ ಜಿತೇಂದ್ರ ಅಹ್ವಾದ್ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿ ಶಿಂಧೆ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕೋರಿದ್ದರು.
ಅಲ್ಲದೆ ತಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದವಿದ್ದು, ಬಂಡಾಯ ಶಾಸಕರು ಸಿಎಂ ಆಗಬಹುದು. ಆದರೆ ಅವರು ಶಿವಸೇನೆಯವರೇ ಆಗಿರಬೇಕು ಎಂದು ಉದ್ದವ್ ಠಾಕ್ರೆ ಕೂಡಾ ಹೇಳಿದ್ದರು. ಆದರೆ ಬಂಡಾಯ ಗುಂಪಿನಲ್ಲಿ ಅತಿಹೆಚ್ಚು ಸಂಖ್ಯಾಬಲ ಹೊಂದಿರುವ ಶಿಂಧೆ ಅವರು ಈ ಆಫರ್ನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ.