ಬೆಂಗಳೂರು, ಜೂ 23 (DaijiworldNews/DB): ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ ಇಬ್ಬರು ಶಾಸಕರನ್ನು ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ.
ಕೋಲಾರ ಶಾಸಕ ಕೆ. ಶ್ರೀನಿವಾಸ ಗೌಡ ಹಾಗೂ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಉಚ್ಚಾಟನೆಗೊಂಡವರು. ಶಾಸಕ ಬಂಡೆಪ್ಪ ಕಾಶೆಂಪುರ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ರಾಜ್ಯ ಘಟಕದ ಪ್ರಮುಖರ ಸಭೆಯಲ್ಲಿ ಉಭಯ ಶಾಸಕರನ್ನು ಉಚ್ಚಾಟಿಸುವ ಸಂಬಂಧ ಕೈಗೊಂಡ ನಿರ್ಣಯ ಆಧರಿಸಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಉಚ್ಚಾಟನೆಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಇಬ್ಬರನ್ನೂ ವಿಧಾನಸಭೆ ಸದಸ್ಯತ್ವದಿಂದ ಅನರ್ಹಗೊಳಿಸುವ ಸಲುವಾಗಿ ಮುಂದಿನ ಮೂರು ದಿನಗಳೊಳಗಾಗಿ ವಿಧಾನಸಭಾ ಅಧ್ಯಕ್ಷರಿಗೆ ದೂರು ನೀಡಲು ಈ ವೇಳೆ ನಿರ್ಧರಿಸಲಾಗಿದೆ.
ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಡಿ. ಕುಪೇಂದ್ರ ರೆಡ್ಡಿ ಅವರಿಗೆ ಮತ ಚಲಾಯಿಸಬೇಕೆಂಬ ವಿಪ್ನ್ನು ಪಕ್ಷ ಹೊರಡಿಸಿದ್ದರೂ, ಈ ಇಬ್ಬರೂ ವಿಪ್ ಉಲ್ಲಂಘಿಸಿ ಬೇರೆ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಿದ್ದರು.
ಗುಬ್ಬಿ ಶ್ರೀನಿವಾಸ್ ಅವರು ಪ್ರಥಮ ಪ್ರಾಶಸ್ತ್ಯದ ಮತವನ್ನು ಬಿಜೆಪಿ ಅಭ್ಯರ್ಥಿ ಲಹರ್ ಸಿಂಗ್ ಅವರಿಗೆ ಮತ್ತು ದ್ವಿತೀಯ ಪ್ರಾಶಸ್ತ್ಯದ ಮತವನ್ನು ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರಿಗೆ ಚಲಾಯಿಸಿದ್ದರು.
ಕೆ. ಶ್ರೀನಿವಾಸ ಗೌಡ ಪ್ರಥಮ ಪ್ರಾಶಸ್ತ್ಯದ ಮತವನ್ನು ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ಗೆ ಹಾಗೂ ದ್ವಿತೀಯ ಪ್ರಾಶಸ್ತ್ಯದ ಮತವನ್ನು ಬಿಜೆಪಿಯ ಲೆಹರ್ ಸಿಂಗ್ಗೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರೂ ಶಾಸಕರು ಇದೀಗ ಜೆಡಿಎಸ್ನಿಂದ ಉಚ್ಚಾಟಿಸಲ್ಪಟ್ಟಿದ್ದಾರೆ.