ಮೈಸೂರು, ಜೂ 23 (DaijiworldNews/DB): ಅಗ್ನಿಪಥ್ ಯೋಜನೆಗೆ ವಿರೋಧ ಮಾಡಬಾರದು. ಇದೊಂದು ಆದರ್ಶಪ್ರಾಯ ಯೋಜನೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹೇಳಿದ್ದಾರೆ.
ಸ್ವಗ್ರಾಮ ಮದ್ದೂರಿನ ಸೋಮನಹಳ್ಳಿಯಲ್ಲಿ ಸಹೋದರ ದಿವಂಗತ ಎಸ್.ಎಂ. ಶಂಕರ್ ಮೆಮೋರಿಯಲ್ ಟ್ರಸ್ಟ್ ಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪಾವಧಿಗೆ ಸೇನೆಗೆ ಯುವಕರನ್ನು ನೇಮಿಸಿಕೊಳ್ಳುವುದು ಸ್ವಾಗತಾರ್ಹ ಕ್ರಮ. ಅಮೆರಿಕಾ, ಬ್ರಿಟನ್ ಸೇರಿದಂತೆ ಹಲವು ದೇಶಗಳಲ್ಲಿ 20 ವರ್ಷ ಮೇಲ್ಪಟ್ಟ ಯುವಕರು ಕಡ್ಡಾಯವಾಗಿ ಎರಡು ವರ್ಷ ಸೈನಿಕ ಶಿಕ್ಷಣ ಪಡೆಯಬೇಕು. ಭಾರತದಲ್ಲಿ ಈ ಯೋಜನೆ ಜಾರಿಯಾಗಿರುವುದು ಅತ್ಯುತ್ತಮವಾಗಿದೆ ಎಂದರು.
ನಾಲ್ಕು ವರ್ಷದ ಸೇವೆ ಬಳಿಕ ಅಗ್ನಿವೀರರಿಗೆ ಮಿಲಿಟರಿಯ ಬೇರೆ ವಿಭಾಗಗಳು, ಸರ್ಕಾರದ ಇತರ ಹುದ್ದೆಗಳು, ಖಾಸಗಿ ಕಂಪೆನಿಗಳಲ್ಲಿಯೂ ಕೆಲಸ ಮಾಡುವುದಕ್ಕೆ ಅವಕಾಶವಿದೆ. ರಾಜಕೀಯ ದೃಷ್ಟಿಯಿಂದ ಈ ಯೋಜನೆಯನ್ನು ನೋಡದೆ ದೇಶದ ಹಿತದ ದೃಷ್ಟಿಯಿಂದ ನೋಡಬೇಕು. ಅಭಿವೃದ್ದಿಶೀಲ ರಾಷ್ಟ್ರಗಳಲ್ಲಿ ಈ ಯೋಜನೆಯಿಂದಾಗಿ ಹೆಚ್ಚು ಲಾಭವಾಗಿರುವುದರಿಂದ ಭಾರತದ ಹೆಜ್ಜೆಯೂ ದೇಶಕ್ಕೆ ಒಳ್ಳೆಯದಾಗಲಿದೆ ಎಂದವರು ತಿಳಿಸಿದರು.
ಸಹೋದರ ಎಸ್.ಎಂ. ಶಂಕರ್ ಪುತ್ರ ಗುರುಚರಣ್ ಅವರು ಮದ್ದೂರಿನಿಂದ ಚುನಾವಣೆಗೆ ಸ್ಪರ್ಧಿಸುವ ಸುದ್ದಿಗಳು ಕೇವಲ ಊಹಾಪೋಹಗಳು. ಗುರುಚರಣ್ ಸದ್ಯ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.