ಮುಂಬೈ, ಜೂ 22 (DaijiworldNews/DB): ಪಕ್ಷದ ಶಾಸಕರು ಹೇಳಿದರೆ ನಾನು ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಿದ್ದ ಎಂದು ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಹೇಳಿದ್ದಾರೆ.
ಫೇಸ್ಬುಕ್ ಲೈವ್ನಲ್ಲಿ ಬುಧವಾರ ಸಂಜೆ ಮಾತನಾಡಿದ ಅವರು, ಯಾರೇ ಒಬ್ಬ ಶಾಸಕ ನನ್ನ ವಿರುದ್ದವಿದ್ದರೂ ಅದು ನನಗೆ ನಾಚಿಕೆಗೇಡಿನ ವಿಷಯ. ನಾನು ಸಿಎಂ ಆಗಿ ಮುಂದುವರಿಯಬಾರದು ಎಂದು ಯಾರೇ ಶಾಸಕರು ಹೇಳಿದರೂ ನಾನು ಈ ಖುರ್ಚಿಯಿಂದ ಹೊರ ಬರುತ್ತೇನೆ. ಅಲ್ಲದೆ ಸಿಎಂ ಅಧಿಕೃತ ನಿವಾಸದಿಂದ ಮಾತೋಶ್ರೀಗೆ ತೆರಳುತ್ತೇನೆ. ಆದರೆ ನನ್ನ ರಾಜೀನಾಮೆಯನ್ನು ಶಾಸಕರೇ ನನ್ನ ಬಳಿ ಬಂದು ತೆಗೆದುಕೊಂಡು ರಾಜಭವನಕ್ಕೆ ಹೋಗಬೇಕು ಎಂದರು.
ಏಕನಾಥ್ ಶಿಂಧೆ ಅವರೊಂದಿಗಿರುವ ಕೆಲವು ಶಾಸಕರು ಈಗಾಗಲೇ ನನಗೆ ಕರೆ ಮಾಡಿದ್ದಾರೆ. ಬಲವಂತವಾಗಿ ಸಾಗಿಸಲಾಗಿದೆ ಎಂದು ಹೇಳಿದ್ದಾರೆ ಎಂದವರು ಇದೇ ವೇಳೆ ತಿಳಿಸಿದ್ದಾರೆ.
ನಮ್ಮ ಜೀವನ ಹಿಂದುತ್ವ. ಬಾಳಾಸಾಹೇಬರು ಕಟ್ಟಿದ ಶಿವಸೇನೆ ಇದಲ್ಲ ಎಂಬುದಾಗಿ ಕೆಲವರು ಹೇಳುತ್ತಿದ್ದಾರೆ. ಹಾಗಾದರೆ ಬಾಳಾ ಸಾಹೇಬಲ ಆಲೋಚನೆಗಳು ಏನು ಎಂಬುದನ್ನು ಅಂತಹವರು ಹೇಳಲಿ ಎಂದವರು ಇದೇ ವೇಳೆ ಸವಾಲು ಹಾಕಿದ್ದಾರೆ.
ಅನಾರೋಗ್ಯದ ಕಾರಣದಿಂದಾಗಿ ಕೆಲ ಕಾಲ ಜನಭೇಟಿ ನನ್ನಿಂದ ಸಾಧ್ಯವಾಗಿರಲಿಲ್ಲ. ಆದರೆ ಈಗ ಮತ್ತೆ ಜನಭೇಟಿ ಮಾಡುತ್ತಿದ್ದೇನೆ. ಅವರ ಪ್ರೀತಿ, ಅಭಿಮಾನವೇ ನನ್ನನ್ನು ಇಲ್ಲಿವರೆಗೆ ಬೆಳೆಸಿದೆ ಎಂದರು.