ನವದೆಹಲಿ, ಜೂ 22 (DaijiworldNews/DB): ಸೇನೆಯನ್ನು ದುರ್ಬಲಗೊಳಿಸಲು ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆಯನ್ನು ಜಾರಿಗೊಳಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಇಡಿ ವಿಚಾರಣೆ ಬಳಿಕ ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಸಂಸದರು ಮತ್ತು ಶಾಸಕರ ಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ಕೃಷಿ ಕಾನೂನುಗಳನ್ನು ಹಿಂತೆಗೆದುಕೊಂಡಂತೆ ಅಗ್ನಿಪಥ್ ಯೋಜನೆಯನ್ನೂ ಸರ್ಕಾರ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಸುಮಾರು ಮೂರು ಮಂದಿ ಕೈಗಾರಿಕೋದ್ಯಮಿಗಳಿಗೆ ದೇಶವನ್ನು ಪ್ರಧಾನಿ ಹಸ್ತಾಂತರಿಸಿದ್ದಾರೆ. ಇದೀಗ ಸೇನೆಯಲ್ಲಿಯೂ ಉದ್ಯೋಗಗಳ ಕೊನೆಯ ಆಶ್ರಯ ಮುಚ್ಚಲು ಹೊರಟಿದ್ದಾರೆ. ಯಾವುದೇ ಪಿಂಚಣಿ ವ್ಯವಸ್ಥೆಯೂ ಇಲ್ಲ. ಒಂದು ದೇಶ, ಒಂದು ಪಿಂಚಣಿ ಎಂದಿದ್ದವರು ಈ ರೀತಿ ಬದಲಾವಣೆ ಮಾಡುತ್ತಿದ್ದಾರೆಂದರೆ ಏನರ್ಥ ಎಂದು ಪ್ರಶ್ನಿಸಿದರು.
ಚೀನಾವು ನಮ್ಮ ನೆಲದ ಮೇಲೆ ಹೊಂಚು ಹಾಕಿ ಕುಳಿತಿದೆ. ಇಂತಹ ಸಂದರ್ಭದಲ್ಲಿ ಸೇನೆಯನ್ನು ಬಲಗೊಳಿಸಬೇಕೇ ಹೊರತು ದುರ್ಬಲಗೊಳಿಸಬಾರದು. ಆದರೆ ಸೇನೆಯನ್ನು ದುರ್ಬಲಗೊಳಿಸಲು ಹೊರಟಿರುವ ಇವರಿಂದಾಗಿ ದೇಶಕ್ಕೆ ಹಾನಿಯೇ ಹೊರತು ಯಾವುದೇ ಲಾಭವಿಲ್ಲ ಎಂದವರು ತಿಳಿಸಿದರು.