ಮುಂಬೈ, ಜೂ 22 (DaijiworldNews/DB): ಮಹಾರಾಷ್ಟ್ರ ಸರ್ಕಾರದಲ್ಲಿ ಬಂಡಾಯವೆದ್ದ ಶಾಸಕ ಏಕನಾಥ್ ಶಿಂಧೆ ಜೊತೆಗಿದ್ದ ಶಾಸಕರೊಬ್ಬರು ಗುಜರಾತ್ನಿಂದ ತಪ್ಪಿಸಿಕೊಂಡು ಬೈಕ್, ಕಾಲ್ನಡಿಗೆ, ಟ್ರಕ್ ಮೂಲಕ ಮಹಾರಾಷ್ಟ್ರಕ್ಕೆ ಮರಳಿದ ಸ್ವಾರಸ್ಯಕರ ಘಟನೆ ವರದಿಯಾಗಿದೆ.
ಉದ್ದವ್ ಠಾಕ್ರೆ ಸರ್ಕಾರದಲ್ಲಿ ಶಾಸಕರಾಗಿದ್ದ ಶಿಂಧೆ ಬಂಡಾಯವೆದ್ದು, ಸುಮಾರು 40 ಶಾಸಕರ ಬೆಂಬಲ ಪಡೆಯುವ ಮೂಲಕ ಉದ್ದವ್ ಠಾಕ್ರೆ ಸರ್ಕಾರಕ್ಕೆ ಸಂಕಷ್ಟ ತಂದೊಡ್ಡಿದ್ದಾರೆ. ಸದ್ಯ ಶಿಂಧೆ ಬೆಂಬಲಿಗ ಶಾಸಕರೆಲ್ಲರೂ ರಹಸ್ಯ ತಾಣದಲ್ಲಿದ್ದಾರೆಂದು ಹೇಳಲಾಗುತ್ತಿದೆ. ಇದೇ ಸಂದಭೃ ಆರು ಮಂದಿ ಶಾಸಕರನ್ನು ಶಿಂಧೆ ಅವರನ್ನು ಭೇಟಿಯಾಗಲೆಂದು ಗುಜರಾತ್ಗೆ ಕರೆದೊಯ್ಯುತ್ತಿದ್ದ ವೇಳೆ ಆ ಗುಂಪಿನಲ್ಲಿದ್ದ ಶಾಸಕ ನಿತಿನ್ ದೇಶ್ಮುಖ್ ನಾಪತ್ತೆಯಾಗಿದ್ದರು.
ವಸಾಯಿ ವಿರಾರ್ ದಾಟಿ ಗುಜರಾತ್ ಗಡಿಯ ಮುಂದೆ ಕಾರು ಸಂಚರಿಸುತ್ತಿದ್ದ ವೇಳೆ ಶಾಸಕರಿಗೆ ಈ ಬಗ್ಗೆ ಅನುಮಾನ ಬಂದಿದೆ.
ಕಾರು ಚೆಕ್ ಪಾಯಿಂಟ್ ಸಮೀಪಿಸುತ್ತಿದ್ದಂತೆ ಶಾಸಕ ನಿತಿನ್ ದೇಶ್ಮುಖ್ ಕಾರಿನಿಂದ ಎಸ್ಕೇಪ್ ಆಗಿದ್ದಾರೆ. ಬಳಿಕ ದ್ವಿಚಕ್ರ ವಾಹನ ಸವಾರರಿಂದ ಲಿಫ್ಟ್ ತೆಗೆದುಕೊಂಡು ಒಂದಷ್ಟು ದೂರ ಕ್ರಮಿಸಿದ್ದಾರೆ. ಬಳಿಕ ಮಹಾರಾಷ್ಟ್ರದವರೆಗೆ ನಾಲ್ಕು ಕಿಮೀ ನಡೆದು ಬೆಳಗ್ಗೆ ದಹಿಸರ್ ಗೆ ಪ್ರಯಾಣಿಸುವ ಟ್ರಕ್ನಲ್ಲಿ ಮಹಾರಾಷ್ಟ್ರಕ್ಕೆ ತೆರಳಿದ್ದಾರೆ. ಮುಂಬೈಗೆ ತೆರಳಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ನಿವಾಸಕ್ಕೆ ಹೋಗಿ ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ ಎನ್ನಲಾಗಿದೆ.