ಹಾಸನ, ಜೂ 22 (DaijiworldNews/DB): ಅಗ್ನಿಪಥ ಯೋಜನೆ ಜಾರಿಗೆ ತರಲು ಹೇಳಿದವರು ಯಾರು? ಹಳೆ ವ್ಯವಸ್ಥೆಯಲ್ಲಿ ದೇಶ ರಕ್ಷಣೆ ಮಾಡಲಿಲ್ಲವೇ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಯಾವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ? ಯೋಜನೆ ಜಾರಿಗೂ ಮುನ್ನ ಯಾರನ್ನು ಕೇಳಲಾಗಿದೆ? ಸಂಸದೀಯ ಸಮಿತಿ ಶಿಫಾರಸ್ಸು ಮಾಡಿದೆಯೇ ಅಥವಾ ಸೇನೆ ಹೇಳಿದೆಯೇ?ಇದಕ್ಕೆ ಕೇಂದ್ರ ಸರಿಯಾದ ಉತ್ತರ ನೀಡಲಿ ಎಂದು ಆಗ್ರಹಿಸಿದರು.
ಏಕಾಏಕಿ ಹತ್ತು ಲಕ್ಷ ಮಂದಿಗೆ ಉದ್ಯೋಗ ನೀಡುವ ಉದ್ದೇಶವೇನು?ಕ್ಷೌರದಂಗಡಿ ತೆರೆಯಲು ಮಿಲಿಟರಿಗೆ ಇವರನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಕೆಲ ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ. ಅಂತಹ ಕಾರಣಕ್ಕೆ ಆದರೆ ಇಲ್ಲಿಂದ ಹೋಗಿ ಅಲ್ಲಿ ತರಬೇತಿ ಪಡೆದುಕೊಳ್ಳಬೇಕಾ? ಆರೆಸ್ಸೆಸ್ ಚಟುವಟಿಕೆ ಸೇನೆಯೊಳಗೆ ಸೇರಲು ಅಗ್ನಿಪಥ್ ಯೋಜನೆಯನ್ನು ಜಾರಿಗೆ ತರಲಾಗುತ್ತದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ಇಡಿ ವಿಚಾರಣೆ ನೆಪದಲ್ಲಿ ರಾಹುಲ್ ಗಾಂಧಿಯವರಿಗೆ ಕಿರುಕುಳ ನೀಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಎಲ್ಲಾ ದಾಖಲಾತಿಗಳು ಇಡಿ ಬಳಿಯೇ ಇರುವಾಗ ವಿಚಾರಣೆ ನಡೆಸಲು ಐದು ದಿನ ತೆಗೆದುಕೊಳ್ಳಬೇಕಾ? ಎಂದವರು ಪ್ರಶ್ನಿಸಿದರು.