ಮುಂಬೈ, ಜೂ 22 (DaijiworldNews/DB): ಮಹಾರಾಷ್ಟ್ರ ಮೈತ್ರಿ ಸರ್ಕಾರಕ್ಕೆ ಸಂಕಷ್ಟ ಎದುರಾಗಿರುವ ಸಂದರ್ಭದಲ್ಲಿ ಶಿವಸೇನೆ ನಾಯಕ ಸಂಜಯ್ ರಾವತ್ ಮನೆಮುಂದೆ ಕಿಡಿಗೇಡಿಗಳು ಬ್ಯಾನರ್ ಅಳವಡಿಸಿರುವ ಫೋಟೊ ವೈರಲ್ ಆಗಿದೆ. 'ನಿಮ್ಮ ದುರಹಂಕಾರ ಇನ್ನು ನಾಲ್ಕು ದಿನಗಳವರೆಗೆ ಇರುತ್ತದೆ, ನಮ್ಮ ರಾಜ ಬರುತ್ತಾನೆ' ಎಂದು ಬ್ಯಾನರ್ನಲ್ಲಿ ಬರೆಯಲಾಗಿದೆ.
ಮಹಾರಾಷ್ಟ್ರ ಮಹಾ ವಿಕಾಸ್ ಅಘಾಡಿ ಮೈತ್ರಿ ಸರ್ಕಾರದ ಆಡಳಿತದ ವಿರುದ್ದ ಬಂಡಾಯ ಎದ್ದಿರುವ 40ಕ್ಕೂ ಹೆಚ್ಚು ಶಾಸಕರು ಸರ್ಕಾರಕ್ಕೆ ಸಂಕಷ್ಟ ತಂದೊಡ್ಡಿದ್ದಾರೆ. ಇದೇ ಸಂದರ್ಭದಲ್ಲಿ ಶಿವಸೇನೆ ನಾಯಕನ ಮನೆ ಮುಂಭಾಗ ಬ್ಯಾನರ್ ಅಳವಡಿಸಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ.
ಬ್ಯಾನರ್ನಲ್ಲಿ ಮಹಾ ಮುಖ್ಯಮಂತ್ರಿ ಉದ್ದವ್ ಠಾಕ್ರೆ, ಬಾಳಾ ಸಾಹೇಬ್ ಠಾಕ್ರೆ, ಆದಿತ್ಯ ಠಾಕ್ರೆ, ಸಂಜಯ್ ರಾವುತ್ ಮತ್ತು ಇತರ ಕೆಲವು ಪ್ರಮುಖ ನಾಯಕರ ಚಿತ್ರಗಳನ್ನು ಹಾಕಲಾಗಿದೆ. ನಿಮ್ಮ ದುರಹಂಕಾರ ನಾಲ್ಕು ದಿನಗಳವರೆಗೆ ಮಾತ್ರ ಇರಲಿದ್ದು, ನಮ್ಮ ರಾಜ ಬರುತ್ತಾನೆ ಎಂದು ಬ್ಯಾನರ್ನಲ್ಲಿ ಬರೆದಿರುವುದು ಹಲವು ಅನುಮಾನ ಮತ್ತು ಅಚ್ಚರಿಗೂ ಕಾರಣವಾಗಿದೆ.
ಮುಂಬೈ ಮಹಾನಗರ ಪಾಲಿಕೆಯ ಸದಸ್ಯೆ ದೀಪಮಾಲಾ ಬಢೆ ಅವರ ಹೆಸರಿನಲ್ಲಿ ಈ ಬ್ಯಾನರ್ ಅಳವಡಿಸಿರುವುದಾಗಿ ತಿಳಿದು ಬಂದಿದೆ.