ಬೆಂಗಳೂರು, ಜೂ 22 (DaijiworldNews/DB): ಸ್ನೇಹಿತರ ನಡುವೆ ಕುರುಬರಹಳ್ಳಿ ವೃತ್ತದ ಬಳಿ ಮಂಗಳವಾರ ರಾತ್ರಿ 50 ರೂಪಾಯಿಗಾಗಿ ನಡೆದ ಜಗಳವೊಂದು ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.
ಕೊಲೆಯಾದ ಯುವಕನನ್ನು ಶಿವಮಾಧು (24) ಎಂದು ಗುರುತಿಸಲಾಗಿದೆ. ಸ್ನೇಹಿತ ಶಾಂತಕುಮಾರ್ ಚಾಕುವಿನಿಂದ ಇರಿದು ಶಿವಮಾಧುನನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಶಿವಮಾಧು ಆಟೋ ಚಾಲಕನಾಗಿ ಹಾಗೂ ಆರೋಪಿ ಝೊಮ್ಯಾಟೋ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಇಬ್ಬರೂ ಬಾಲ್ಯಸ್ನೇಹಿತರಾಗಿದ್ದು, ಕೆಲ ದಿನಗಳ ಹಿಂದೆ ಕುರುಬರಹಳ್ಳಿ ವೃತ್ತದ ಬಳಿ ವಾಸಿಸುತ್ತಿದ್ದರು. ಮಂಗಳವಾರ ಸ್ನೇಹಿತರ ಜೊತೆ ಸೇರಿ ಇಬ್ಬರೂ ಸಮೀಪದ ಮೈದಾನಕ್ಕೆ ಕ್ರಿಕೆಟ್ ಆಡಲು ಹೋಗಿ ಬಂದಿದ್ದರು. ಬಳಿಕ ರಾತ್ರಿ ಯಾವುದೋ ಕೆಲಸಕ್ಕಾಗಿ ಸನಿಹದ ಸೈಬರ್ ಸೆಂಟರ್ಗೆ ಹೋಗಿದ್ದರು. ಈ ವೇಳೆ ಶಿವಮಾಧು ಶಾಂತಕುಮಾರ್ ಜೇಬಿನಿಂದ 50 ರೂ. ತೆಗೆದುಕೊಂಡಿದ್ದು, ಇದಕ್ಕಾಗಿ ಇಬ್ಬರ ನಡುವೆ ಜಗಳವಾಗಿದೆ. ಜಗಳ ತಾರಕಕ್ಕೇರಿ ಶಾಂತಕುಮಾರ್ ತನ್ನ ಬಳಿಯಿದ್ದ ಚಾಕುವಿನಿಂದ ಶಿವಮಾಧುಗೆ ಇರಿದು ಪರಾರಿಯಾಗಿದ್ದಾನೆ. ಸ್ನೇಹಿತರು ತತ್ಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಿದರಾದರೂ ತೀವ್ರ ರಕ್ತಸ್ರಾವದಿಂದ ಆತ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ.
ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.