ಮಹಾರಾಷ್ಟ್ರ, ಜೂ 22 (DaijiworldNews/DB): ಮಹಾರಾಷ್ಟ್ರದ ಉದ್ದವ್ ಠಾಕ್ರೆ ಸಂಪುಟದಲ್ಲಿ ಸಚಿವರಾಗಿರುವ ಅವರ ಪುತ್ರ ಆದಿತ್ಯ ಠಾಕ್ರೆ ಅವರು ಟ್ವಿಟರ್ನಲ್ಲಿ ತಮ್ಮ ಹೆಸರಿನೊಂದಿಗಿದ್ದ 'ಮಿನಿಸ್ಟರ್' ಪದವನ್ನು ತೆಗೆದು ಹಾಕುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರಕ್ಕೆ ಸಂಬಂಧಿಸಿದಂತೆ ಮಂಗಳವಾರದಿಂದ ಹಲವು ನಾಟಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಮುಖ್ಯಮಂತ್ರಿ ಉದ್ದವ್ ಠಾಕ್ರೆ ವಿರುದ್ದ ಬಂಡಾಯ ಎದ್ದಿರುವ ಸಚಿವ ಏಕನಾಥ ಶಿಂಧೆ ಅವರು 40 ಕ್ಕೂ ಹೆಚ್ಚು ಶಾಸಕರೊಂದಿಗೆ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಸರ್ಕಾರಕ್ಕೆ ಬೆಂಬಲ ನೀಡಿರುವುದನ್ನು ಹಿಂಪಡೆಯುವ ನಿಟ್ಟಿನಲ್ಲಿ ಇವರು ಕಾರ್ಯಯೋಜಿಸುತ್ತಿದ್ದಾರೆಂದು ಹೇಳಲಾಗಿದೆ. ಇತ್ತ ಶಿಂಧೆ ಅವರನ್ನು ಸಂಪರ್ಕಿಸಲು ಉದ್ದವ್ ಠಾಕ್ರೆ ಅವರು ಹಲವು ರೀತಿಯ ಪ್ರಯತ್ನಗಳನ್ನು ನಡೆಸಿದರೂ ಸಂಪರ್ಕ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
ಈ ನಡುವೆ ಉದ್ದವ್ ಠಾಕ್ರೆ ಅವರ ಪುತ್ರ, ಮಹಾ ಸಂಪುಟದಲ್ಲಿ ಸಚಿವರಾಗಿರುವ ಆದಿತ್ಯ ಠಾಕ್ರೆ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹೆಸರಿನೊಂದಿಗಿದ್ದ ಮಿನಿಸ್ಟರ್ ಪದವನ್ನು ತೆಗೆದು ಹಾಕಿ ಅಚ್ಚರಿ ಮೂಡಿಸಿದ್ದಾರೆ. ಮೂಲಗಳ ಪ್ರಕಾರ, ಸದ್ಯ ತಲೆದೋರಿರುವ ಬಿಕ್ಕಟ್ಟು ಶಮನಗೊಳಿಸುವ ಸಲುವಾಗಿ ಆದಿತ್ಯ ಠಾಕ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ ಎಂಬುದಾಗಿ ವರದಿಗಳು ತಿಳಿಸಿವೆ.