ಬೆಂಗಳೂರು, ಜೂ 22 (DaijiworldNews/DB): ಪಾಕಿಸ್ತಾನ ಮತ್ತು ಇತರ ರಾಷ್ಟ್ರಗಳಿಂದ ಬರುವ ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ಬೇಹುಗಾರಿಕೆ ಮಾಡುತ್ತಿದ್ದ ಪ್ರಕರಣವೊಂದನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಭೇದಿಸಿದ್ದು, ಓರ್ವನನ್ನು ಬಂಧಿಸಿದ್ದಾರೆ.
ಕೇರಳ ಮೂಲದ ಶರ್ಫೂದ್ದೀನ್(32) ಎಂಬಾತ ಬಂಧಿತ ಆರೋಪಿ. ಆರೋಪಿಯಿಂದ 58 ಸಿಮ್ ಬಾಕ್ಸ್ಗಳು ಮತ್ತು 2,144 ಸಿಮ್ ಕಾರ್ಡ್ಗಳು ಹಾಗೂ ಇತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಾರತೀಯ ಸೇನೆಯ ಗುಪ್ತಚರ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಸಿಸಿಬಿ ಅಧಿಕಾರಿಗಳು ಆತನನ್ನು ಬಂಧಿಸಿದ್ದು, ಸಿಸಿಬಿ ಮತ್ತು ಭಾರತೀಯ ಸೇನೆಯ ಗುಪ್ತಚರ ಇಲಾಖೆ ಅಧಿಕಾರಿಗಳು ಜಂಟಿಯಾಗಿ ವಿಚಾರಣೆ ನಡೆಸುತ್ತಿದ್ದಾರೆ.
ಸುಮಾರು ನಾಲ್ಕೈದು ವರ್ಷದ ಹಿಂದೆ ಆತ ವಯನಾಡಿನಿಂದ ಬೆಂಗಳೂರಿಗೆ ಬಂದು ಸಣ್ಣಪುಟ್ಟ ಕೆಲಸಗಳನ್ನು ನಿರ್ವಹಿಸುತ್ತಿದ್ದ. ಅನ್ಯರಾಜ್ಯಗಳ ಕೆಲವು ವ್ಯಕ್ತಿಗಳ ಸಹಕಾರ ಪಡೆದುಕೊಂಡು ಹೆಸರಘಟ್ಟ ಸಮೀಪದ ಭುವನೇಶ್ವರಿನಗರ, ಸಿದ್ದೇಶ್ವರ ಲೇಔಟ್, ಚಿಕ್ಕಸಂದ್ರ ಮುಂತಾದೆಡೆ ಬಾಡಿಗೆ ಮನೆಗಳನ್ನು ಪಡೆದುಕೊಂಡಿದ್ದ. ಅಲ್ಲೆಲ್ಲ ಸಿಮ್ ಬಾಕ್ಸ್ ಅಳವಡಿಸಿಕೊಂಡು ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುತ್ತಿದ್ದ. ಪರಿವರ್ತನೆ ಕರೆಗಳ ಕುರಿತು ಸೇನೆಯ ಗುಪ್ತಚರ ವಿಭಾಗ ಹೆಚ್ಚು ನಿಗಾವಹಿಸುತ್ತಿದ್ದು, ಬೆಂಗಳೂರಿನಲ್ಲಿಯೂ ಈ ಕೃತ್ಯ ನಡೆಯುತ್ತಿರುವ ಅನುಮಾನದ ಹಿನ್ನೆಲೆಯಲ್ಲಿ ರಾಜ್ಯ ಗುಪ್ತಚರ ಇಲಾಖೆಗೆ ಮಾಹಿತಿ ರವಾನಿಸಿತ್ತು. ಈ ಮಾಹಿತಿ ಆಧರಿಸಿ ಸಿಸಿಬಿ ಆರೋಪಿಯನ್ನು ಬಂಧಿಸಿದೆ.