ಬಳ್ಳಾರಿ, ಜೂ 22 (DaijiworldNews/DB): ನನಗೆ ಶಾಶಕ, ಮಂತ್ರಿಯಾಗಬೇಕೆಂಬ ಆಸೆಯಿಲ್ಲ. ಮನಸ್ಸು ಮಾಡಿದರೆ ಒಂದು ದಿನವಾದರೂ ಮುಖ್ಯಮಂತ್ರಿಯಾಗಬಲ್ಲೆ ಎಂದು ಮಾಜಿ ಸಚಿವ ಬಿ. ಜನಾರ್ದನ ರೆಡ್ಡಿ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಮಂಗಳವಾರ ನಡೆದ ಶಾಸಕ ಸೋಮಶೇಖರ್ ರೆಡ್ಡಿ ಹುಟ್ಟುಹಬ್ಬದ ಸಮಾರಂಭದಲ್ಲಿ ಮಾತನಾಡಿದ ಅವರು, ರೆಡ್ಡಿ ಮತ್ತು ರಾಮುಲು ಸಹೋದರರಿಗೆ ಹಣದ ಅವಶ್ಯಕತೆ ಇಲ್ಲ. ನನಗಂತೂ ಶಾಸಕ, ಮಂತ್ರಿ ಆಗುವ ಆಸೆ, ಆಕಾಂಕ್ಷೆಗಳಿಲ್ಲ. ಮನಸ್ಸು ಮಾಡಿದರೆ ಮುಖ್ಯಮಂತ್ರಿಯೇ ಆಗುವ ತಾಕತ್ತು ನನಗಿದೆ ಎಂದರು.
ಕರುಣಾಕರ ರೆಡ್ಡಿಯವರು ಲೋಕಸಭಾ ಕ್ಷೇತ್ರದ ಕೊನೆಯ ಸದಸ್ಯರಾಗಿ ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ. ಬಳ್ಳಾರಿ ನಗರಸಭೆ ಅಧ್ಯಕ್ಷರಾಗಿದ್ದ ಸೋಮಶೇಖರ್ ರೆಡ್ಡಿ ಶಾಸಕರಾಗುವಲ್ಲಿ ತನಕ ಬೆಳೆದಿದ್ದಾರೆ. ನಾನು ರಾಜಕೀಯದಲ್ಲಿ ಬೆಳೆಯಲು ಹಲವು ರೀತಿಯ ಕಷ್ಟಗಳನ್ನು ಎದುರಿಸಿದ್ದೇನೆ. ಆದರೆ ಬಳ್ಳಾರಿ ಕನಕದುರ್ಗಮ್ಮ ದೇವಿಯ ಆಶೀರ್ವಾದದಿಂದ ಆ ಕಷ್ಟವನ್ನೆಲ್ಲ ಮೆಟ್ಟಿನಿಂತು ಇಂದು ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದರು.
ನಾನು ಎದುರಿಸಿದ ತೊಂದರೆಗಳು ಅಷ್ಟಿಷ್ಟಲ್ಲ. ಹಲವು ರೀತಿಯ ಸಮಸ್ಯೆಗಳನ್ನು ನನಗೆ ನೀಡಿದ್ದಾರೆ. ಮೇಲಿನವರ ಆದೇಶವಿರುವ ಕಾರಣ ನಿಮಗೆ ತೊಂದರೆ ಮಾಡುತ್ತಿದ್ದೇವೆಂದು ಸಿಬಿಐಯವರೇ ನನಗೆ ಹೇಳಿದ್ದರು. ಆದರೆ ಬಳ್ಳಾರಿಯ ಜನ ನನ್ನ ಮೇಲಿಟ್ಟಿರುವ ಉತ್ತಮ ಅಭಿಪ್ರಾಯ ಅದೇ ಸಿಬಿಐನವರಿಗೆ ಗೊತ್ತಿತ್ತು ಎಂದು ಇದೇ ವೇಳೆ ಅವರು ತಿಳಿಸಿದರು.