ಗುವಾಹಟಿ, ಜೂ 22 (DaijiworldNews/MS): ಮಹಾರಾಷ್ಟ್ರದ 'ಮಹಾ ವಿಕಾಸ್ ಅಘಾಡಿ' ಸರ್ಕಾರದ ವಿರುದ್ಧ ಅಸಮಾಧಾನಗೊಂಡು ಶಿವಸೇನಾದ ಹಲವು ಶಾಸಕರು,ಮೈತ್ರಿ ಸರ್ಕಾರಕ್ಕೆ ಬಂಡಾಯದ ಬಿಸಿ ಮುಟ್ಟಿಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಶಿವಸೇನಾ ಶಾಸಕಾಂಗ ಪಕ್ಷದ ನಾಯಕತ್ವದಿಂದ ತೆಗೆದು ಹಾಕಿದೆ.
ಗುಜರಾತ್ನ ಸೂರತ್ನಲ್ಲಿ ಬೀಡುಬಿಟ್ಟಿದ್ದ ಬಂಡಾಯ ಶಾಸಕರು ಇದೀಗಾ ಅಸ್ಸಾಂ ತಲುಪಿದ್ದಾರೆ. ಈ ಕುರಿತು ಮಾಧ್ಯಮಕ್ಕೆ ಬುಧವಾರ ಪ್ರತಿಕ್ರಿಯಿಸಿರುವ ಶಿವಸೇನೆ ನಾಯಕ ಏಕನಾಥ್ ಶಿಂಧೆ " ಬಾಳ ಸಾಹೇಬ್ ಠಾಕ್ರೆಯ ಹಿಂದುತ್ವವನ್ನು ನಾವು ಪಾಲಿಸುತ್ತಿದ್ದು, ಮುಂದೆಯೂ ಪಾಲಿಸುತ್ತೇವೆ. ಬಾಳ ಸಾಹೇಬ್ ಠಾಕ್ರೆಯ ಶಿವಸೇನೆಯನ್ನು ನಾವು ತೊರೆದಿಲ್ಲ, ಮುಂದೆಯೂ ತೊರೆಯುವುದೂ ಇಲ್ಲ,ನಾವು ಬಾಳಾಸಾಹೇಬ್ ಠಾಕ್ರೆ ಅವರ ಶಿವ ಸೈನಿಕರು. ಬಾಳಾಸಾಹೇಬ್ ಅವರು ನಮಗೆ ಹಿಂದುತ್ವದ ಕುರಿತು ಕಲಿಸಿದರು. ಅಧಿಕಾರಕ್ಕೋಸ್ಕರ ಅವರ ಆದರ್ಶಗಳಿಗೆ ಹಾಗೂ ಧರ್ಮವೀರ ಆನಂದ ದಿಘೆ ಅವರ ಬೋಧನೆಗಳಿಗೆ ನಾವು ದ್ರೋಹ ಬಗೆಯುವುದಿಲ್ಲ ಎಂದು ಹೇಳಿದ್ದಾರೆ.
ಇನ್ನೊಂದೆಡೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ಕಾರ ಉಳಿಸಿಕೊಳ್ಳುವ ಕಸರತ್ತು ಆರಂಭಿಸಿದ್ದು, ಮಂಗಳವಾರ ತಮ್ಮ ನಿವಾಸದಲ್ಲಿ ಶಿವಸೇನೆ ಶಾಸಕರ ಸಭೆಯನ್ನು ನಡೆಸಿದ್ದಾರೆ. ಬಂಡಾಯ ಎದ್ದಿರುವ ಏಕನಾಥ ಶಿಂಧೆ ಮನವೊಲಿಸುವ ಕಾರ್ಯವನ್ನು ಶಿವಸೇನೆಯ ನಾಯಕರು ಮಾಡುತ್ತಿದ್ದಾರೆ.