ಬೆಂಗಳೂರು, ಜೂ 21 (DaijiworldNews/DB): ದೃಷ್ಟಿದೋಷ ಮತ್ತು ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಯೊಬ್ಬಳಿಗೆ ಎರಡೇ ಗಂಟೆಯಲ್ಲಿ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾನವೀಯತೆ ಮೆರೆದಿದ್ದಾರೆ. ಮಗುವಿನ ಚಿಕಿತ್ಸಾ ವೆಚ್ಚವನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಭರಿಸುವುದಾಗಿ ಭರವಸೆ ನೀಡಿದ್ದಾರೆ.
ದೃಷ್ಟಿ ದೋಷ ಮತ್ತು ಮೆದುಳಿನ ಸಮಸ್ಯೆಯಿಂದ ಬಳಲುತ್ತಿದ್ದ ಮಗು ಕೃಷ್ಣವೇಣಿಗೆ ಚಿಕಿತ್ಸೆ ನೀಡಲು ನೆರವು ನೀಡುವಂತೆ ಮಗುವಿನ ತಾಯಿ ಶಂಕ್ರಮ್ಮ ಇಂದು ಬೆಳಗ್ಗೆ ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದರು. ಕೂಡಲೇ ಆ ತಾಯಿಯ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಯವರು ಎರಡೇ ತಾಸಿನೊಳಗೆ ಮುಖ್ಯಮಂತ್ರಿ ಪರಿಹಾರ ನಿಧಿ ಶಾಖೆಯಿಂದ ಧಾರವಾಡದ ಎಸ್.ಡಿ.ಎಂ. ಆಸ್ಪತ್ರೆಗೆ ಪತ್ರ ಬರೆದು, ಕೃಷ್ಣವೇಣಿಯ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು. ಅಲ್ಲದೆ, ಮಗುವಿನ ಚಿಕಿತ್ಸೆ ಪೂರ್ಣಗೊಂಡ ಬಳಿಕ ಬಿಲ್ನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದ್ದು, ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಅಧಿಕೃತ ಆದೇಶ ನೀಡಿದ್ದಾರೆ.
ಮಗುವಿನ ಚಿಕಿತ್ಸೆಗೆ ನೆರವಾದ ಸಿಎಂ ಬೊಮ್ಮಾಯಿ ಅವರಿಗೆ ಮಗುವಿನ ತಾಯಿ ಧನ್ಯವಾದ ಸಲ್ಲಿಸಿದ್ದಾರೆ. ಅಲ್ಲದೇ ಸಿಎಂ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.